ಬಂಟ್ವಾಳ, ಮಾರ್ಚ್ 22, 2022 (ಕರಾವಳಿ ಟೈಮ್ಸ್) : ರಾಜ್ಯದ ಎಲ್ಲಾ ಗ್ರಾಮಗಳಿಗೆ ಸ್ಮಶಾನ ಒದಗಿಸುವ ಬಗ್ಗೆ ಸರಕಾರ ಸುತ್ತೋಲೆ ಹೊರಡಿಸಿದೆ. ರಾಜ್ಯದಲ್ಲಿನ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸುವುದು ಸರಕಾರದ ಮೂಲ ಉದ್ದೇಶವಾಗಿದ್ದು ಸ್ಮಶಾನ ಕಲ್ಪಿಸಲು ಕೆಲ ನಿಯಮಗಳನ್ನು ಸರಕಾರ ಸಾರ್ವಜನಿಕರಿಗೆ ತಿಳಿಯಪಡಿಸಿದೆ.
ಸರಕಾರದ ಜಮೀನು ಲಭ್ಯವಿರುವ ಕಡೆ ಸ್ಮಶಾನ ಉದ್ದೇಶಕ್ಕಾಗಿ 2.00 ಎಕರೆ ವಿಸ್ತೀರ್ಣದ ಜಮೀನನ್ನು ಕಾಯ್ದಿರಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ಪ್ರತ್ಯಾಯೋಜಿಸಲಾಗಿರುತ್ತದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 71ರಡಿ ಪ್ರದತ್ತವಾದ ಅಧಿಕಾರದನ್ವಯ ಜಿಲ್ಲಾಧಿಕಾರಿಗಳು ರಾಜ್ಯದಲ್ಲಿ ಸರಕಾರಿ ಜಮೀನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಗೋಮಾಳ ಜಮೀನು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದ್ದಾಗ್ಯೂ ಸ್ಮಶಾನಕ್ಕಾಗಿ ಮೀಸಲಿಡಲು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4) (111) ರಲ್ಲಿ ಜಿಲ್ಲಾಧಿಕಾರಿಯವರಿಗೆ ಅವಕಾಶ ಕಲ್ಪಿಸಲಾಗಿದೆ. ಸರಕಾರಿ ಜಮೀನು ಖರಾಬು ಎಂದು ವರ್ಗೀಕೃತವಾಗಿದ್ದಲ್ಲಿ, ಸ್ಮಶಾನದ ಉದ್ದೇಶವು ಸಾರ್ವಜನಿಕ ಉದ್ದೇಶವಾಗಿರುವುದರಿಂದ ಅಂತಹ ಜಮೀನುಗಳನ್ನು ಸಹ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ರ ಕಲಂ 71 ರನ್ವಯ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಒತ್ತುವರಿಯಿಂದ ತೆರವುಗೊಳಿಸಿರುವ ಸರಕಾರಿ ಜಮೀನುಗಳನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ರ ಕಲಂ 71 ರನ್ವಯ ಜಿಲ್ಲಾಧಿಕಾರಿಗಳು ಸ್ಮಶಾನದ ಉದ್ದೇಶಕ್ಕಾಗಿ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಮಾಡುತ್ತಿರುವ ಸಾಗುವಳಿಯನ್ನು ಸಕ್ರಮೀಕರಣಕ್ಕಾಗಿ ಸಲ್ಲಿಸುವ ಅರ್ಜಿಗಳ ಪೈಕಿ ಅನರ್ಹ ಅರ್ಜಿಗಳು ಇದ್ದಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲಿ ಅಂತಹ ಅನರ್ಹ ಅರ್ಜಿಗಳನ್ನು ವಜಾಗೊಳಿಸಿ ಜಮೀನನ್ನು ಸರಕಾರದ ವಶಕ್ಕೆ ಪಡೆದು ಸ್ಮಶಾನಕ್ಕಾಗಿ ಕಾಯ್ದಿರಿಸುವುದು. ಈ ಮೆಲ್ಕಂಡ ಎಲ್ಲಾ ಕ್ರಮಗಳನ್ನು ಕೈಗೊಂಡ ನಂತರವೂ ಸಹ ಯಾವುದೇ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಕಾಯ್ದಿರಿಸಲು ಸರಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಅಂತಹ ಗ್ರಾಮಗಳಲ್ಲಿ ಮಾರ್ಗಸೂಚಿ ಮೌಲ್ಯದ ಮೂರು ಪಟ್ಟು ದರದಲ್ಲಿ ಖಾಸಗಿಯವರಿಂದ ಜಮೀನುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ತಮ್ಮ ಗ್ರಾಮಗಳಲ್ಲಿ ಸ್ಮಶಾನದ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಅಥವಾ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಅದೇ ರೀತಿ ಸರಕಾರಿ ಜಮೀನು, ಕೆರೆ, ಕಟ್ಟೆ, ಕುಂಟೆ, ಹಳ್ಳ, ಸರೋವರ ಮತ್ತು ಇನ್ನಿತರೆ ಜಲಕಾಯ/ ಜಲ ಮೂಲಗಳೆಂದು ವರ್ಗೀಕೃತವಾದ ಜಮೀನುಗಳನ್ನು ಗ್ರಾಮ ನಕಾಶೆಯಲ್ಲಿ ರಸ್ತೆ, ಬೀದಿ, ಬಂಡಿದಾರಿ, ಓಣಿ ಅಥವಾ ಹಾದಿ ಎಂದು ನಮೂದಾಗಿರುವ ಇತರೆ ಎಲ್ಲಾ ಸರಕಾರಿ ಜಮೀನುಗಳು ಒತ್ತುವರಿಯಾಗಿದ್ದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಅಥವಾ ತಹಶೀಲ್ದಾರ್ ಅವರಿಗೆ ದೂರು ನೀಡುವಂತೆ ಬಂಟ್ವಾಳ ತಾಲೂಕು ತಹಶೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment