ಮಂಗಳೂರು, ಮಾರ್ಚ್ 13, 2022 (ಕರಾವಳಿ ಟೈಮ್ಸ್) : ರಾಜ್ಯದ ಮಾಜಿ ಸಚಿವ, ಮಂಗಳೂರು ಶಾಸಕ, ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್ ಅವರಿಗೆ ಶನಿವಾರ ಬಿಗ್ ಶಾಕ್ ಎದುರಾಗಿದೆ. ಕಳೆದ 24 ವರ್ಷಗಳ ಕಾಲ ತನ್ನ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ದಿಡೀರ್ ಆಗಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಕಮಲ ಪಾಳಯ ಸೇರಿಕೊಂಡಿದ್ದಲ್ಲದೆ ಯು ಟಿ ಖಾದರ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಯು.ಟಿ.ಕೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಯು .ಟಿ. ಖಾದರ್ ಓರ್ವ ಅತ್ಯಂತ ಭ್ರಷ್ಟ ರಾಜಕಾರಣಿ. ಅವರ ನಡವಳಿಕೆಯಿಂದ ನಾವು ಬೇಸತ್ತಿದ್ದೇವೆ. ಈ ಕಾರಣದಿಂದಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇವೆ ಎಂದು ಹೇಳಿದರು. ಉಳ್ಳಾಲ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ. ಅಲ್ಪ ಸ್ವಲ್ಪ ಅನುದಾನದ ಕಾಮಗಾರಿ ಮಾಡಿ ವಿಶೇಷ ಫೋಸ್ ನೀಡಿದ್ದಾರೆ.
ಅವರಿಗೆ ದೇಶದಾದ್ಯಂತ ಮನೆಯಿದೆ, ಆದರೆ ಉಳ್ಳಾಲದ ಬಡವರಿಗೆ ಮಾತ್ರ ಸೂರು ಕಲ್ಪಿಸಲು ಖಾದರ್ ವಿಫಲರಾಗಿದ್ದಾರೆ. ಅಬ್ಬಕ್ಕ ನಾಡು ಎಂದು ಹೇಳುವ ಇವರು ಮಹಿಳಾ ಕಾಲೇಜು ಆರಂಭಕ್ಕೆ ಇದುವರೆಗೂ ಮನಸ್ಸು ಮಾಡಿಲ್ಲ. ಮದುವೆ, ಮುಂಜಿ, ಮಕ್ಕಳ ತೊಟ್ಟಿಲು ಹಾಕುವ ಕಾರ್ಯದಲ್ಲಿ ಭಾಗಿಯಾಗಿ ಬಿಟ್ಟಿ ಪ್ರಚಾರ ಪಡೆದುಕೊಳ್ಳುವುದು ಬಿಟ್ಟು ಬೇರೇನನ್ನೂ ಮಾಡಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
0 comments:
Post a Comment