ಬಂಟ್ವಾಳ, ಮಾರ್ಚ್ 30, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮೂಡ ಮುನ್ನೂರು ಗ್ರಾಮದ ಶಾರದಾನಗರ-ಬರ್ಕೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಗಾಂಜಾ, ಅಟೋ ರಿಕ್ಷಾ ಹಾಗೂ ನಗದು ಸಹಿತ ಆರೋಪಿ ಸಜಿಪನಡು ಗ್ರಾಮದ ಕಂಚಿನಡ್ಕಪದವು ನಿವಾಸಿ ಶೇಖಬ್ಬ ಅವರ ಪುತ್ರ ಸಿದ್ದೀಕ್ ಯಾನೆ ಕೋಳಿ ಸಿದ್ದೀಕ್ (36) ನನ್ನು ಬಂಧಿಸಿದ್ದಾರೆ.
ಆರೋಪಿ ಸಿದ್ದೀಕ್ ಬೇಂಕೆ ಬಳಿ ಅಟೋ ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕಾಗಿ ಗಿರಾಕಿಗಳಿಗೆ ಕಾಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ದಾಳಿ ನಡಸಿದ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ವಿವೇಕಾನಂದ ನೇತತ್ವದ ಪೊಲೀಸರು ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯಿಂದ 2 ಸಾವಿರ ರೂಪಾಯಿ ಮೌಲ್ಯದ ಗಾಂಜಾ, 60 ಸಾವಿರ ರೂಪಾಯಿ ಮೌಲ್ಯದ ಅಟೋ ರಿಕ್ಷಾ ಹಾಗೂ 1,260/- ರೂಪಾಯಿ ನಗದು ಸಹಿತ ಸುಮಾರು 80 ಸಾವಿರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳ ರಾಜ್ಯದ ಉಪ್ಪಳ ಕಡೆಯಿಂದ ಗಾಂಜಾ ಸಾಗಾಟ ಮಾಡಿ ತಂದು ಅದನ್ನು ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
0 comments:
Post a Comment