ಬಂಟ್ವಾಳ, ಮಾರ್ಚ್ 28, 2022 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಈ ಬಾರಿ ಕೊರೋನಾ ಮುಕ್ತವಾಗಿ ನಡೆದಿದ್ದು, ಬಂಟ್ವಾಳ ತಾಲೂಕಿನಲ್ಲಿಯೂ ಮೊದಲ ದಿನದ ಪರೀಕ್ಷೆ ಸೋಮವಾರ ಸುಸೂತ್ರವಾಗಿ ಯಾವುದೇ ಗೊಂದಲಗಳಿಲ್ಲದೆ ನೆರವೇರಿದೆ.
ತಾಲೂಕಿನಲ್ಲಿ ಒಟ್ಟು 5598 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 29 ಮಂದಿ ವಿದ್ಯಾರ್ಥಿಗಳು ಹಾಗೂ 4 ಮಂದಿ ಮರು ಪರೀಕ್ಷೆ ಬರೆಯಬೇಕಾಗಿದ್ದ ಅಭ್ಯರ್ಥಿಗಳ ಸಹಿತ ಒಟ್ಟು 33 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾದ ಪರಿಣಾಮ 5565 ಮಂದಿ ಮಾತ್ರ ಮೊದಲ ದಿನದ ಪರೀಕ್ಷೆಗೆ ಹಾಜರಾಗಿದ್ದಾರೆ.
ತಾಲೂಕಿನಲ್ಲಿ ಒಟ್ಟು 17 ಪರೀಕ್ಷಾ ಕೇಂದ್ರಗಳನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಸಜ್ಜುಗೊಳಿಸಲಾಗಿತ್ತು. ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ ಪಿ ಅವರ ನೇತೃತ್ವದದಲ್ಲಿ ನೋಡಲ್ ಅಧಿಕಾರಿಗಳ ತಂಡ ಪರೀಕ್ಷಾ ಕೇಂದ್ರಗಳ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದರು. ಪರೀಕ್ಷಾ ಕೇಂದ್ರಗಳ ಸುತ್ತ 100 ಮೀ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಕೆಲವು ಸೂಕ್ಷ್ಮ ಪರೀಕ್ಷಾ ಕೇಂದ್ರಗಳ ಬಳಿ ಪೊಲೀಸ್ ಬಂದೋಬಸ್ತ್ ಕೂಡಾ ಏರ್ಪಡಿಸಲಾಗಿತ್ತು.
0 comments:
Post a Comment