ಬೆಂಗಳೂರು, ಮಾರ್ಚ್ 28, 2022 (ಕರಾವಳಿ ಟೈಮ್ಸ್) : ಹತ್ತನೇ ತರಗತಿ ಪರೀಕ್ಷೆಯ ಮೊದಲ ದಿನವಾದ ಸೋಮವಾರ ರಾಜ್ಯದಾದ್ಯಂತ ಸುಸೂತ್ರವಾಗಿ ನಡೆದಿದೆ ಎಂದು ಪ್ರಾಥಮಿಕ ಮತ್ತು ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಬೆಂಗಳೂರಿನ ಮಾಗಡಿ ರಸ್ತೆ ಅಗ್ರಹಾರ ದಾಸರಹಳ್ಳಿಯಲ್ಲಿರುವ ಸರಕಾರಿ ಪ್ರೌಢಶಾಲೆಗೆ ಖುದ್ದು ಭೇಟಿ ನೀಡಿದ ಸಚಿವ ಬಿ.ಸಿ. ನಾಗೇಶ್ ಅವರು, ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಶುಭಾಶಯ ತಿಳಿಸಿದರಲ್ಲದೆ ಪರೀಕ್ಷೆಗೆ ನಿಯೋಜಿತರಾಗಿದ್ದ ಅಧಿಕಾರಿ ಮತ್ತು ಶಿಕ್ಷಕರ ಜೊತೆ ಮಾತನಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ 2 ವರ್ಷಗಳ ಬಳಿಕ ಪೂರ್ಣ ಪ್ರಮಾಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಮಕ್ಕಳು ಖುಷಿಯಿಂದ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ. ಶಿಕ್ಷಕರು ಕೂಡ ಅತ್ಯಂತ ಉತ್ಸಾಹದಿಂದ ಪರೀಕ್ಷೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಅಗತ್ಯ ಸಿಬ್ಬಂದಿ ನಿಯೋಜನೆ, ಪೆÇಲೀಸ್ ಭದ್ರತೆ, ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಸಂಪೂರ್ಣ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಪೈಕಿ ಶೇ. 97.59ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಅನಾರೋಗ್ಯ ಕಾರಣ 336 ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದಲ್ಲೇ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು ಎಂದು ಸಚಿವರು ತಿಳಿಸಿದರು.
ಮುಖ್ಯ ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸಲು ಕನಿಷ್ಠ 2 ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದೆ. ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿತ್ತು. ಮಕ್ಕಳು ಭಯ ಇಲ್ಲದೇ ಪರೀಕ್ಷೆ ಬರೆಯಲು ಇಲಾಖೆಯಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ನಾಗೇಶ್ ತಿಳಿಸಿದರು.
ವಿದ್ಯಾರ್ಥಿಗಳು ಸರಕಾರದ ಆದೇಶ, ನಿಯಮಗಳು, ರಾಜ್ಯ ಹೈಕೋರ್ಟ್ ತೀರ್ಪು, ಮಂಡಳಿಯಿಂದ ನೀಡಲಾಗಿರುವ ಪರೀಕ್ಷೆ ಸೂಚನೆಗಳನ್ನು ಪಾಲಿಸಬೇಕು. ಮಕ್ಕಳಲ್ಲಿ ಶಿಸ್ತು, ಸಮಾನತೆ, ಏಕತೆಯ ಭಾವನೆ ಮೂಡಿಸುವ ಉದ್ದೇಶದಿಂದ ಸಮವಸ್ತ್ರ ನಿಯಮವನ್ನು ದಶಕಗಳ ಹಿಂದೆಯೇ ಜಾರಿಗೆ ತರಲಾಗಿದೆ. ನಿಯಮವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಯಾವುದೇ ವ್ಯಕ್ತಿಗಳು, ಸಂಘಟನೆಗಳು ಸಮವಸ್ತ್ರ ನಿಯಮ ಸಡಿಲಿಸಬೇಕು ಎಂಬ ಬೇಡಿಕೆಗೆ ಅರ್ಥವಿಲ್ಲ ಎಂದು ಸಚಿವರು ಇದೇ ವೇಳೆ ಹೇಳಿದರು.
ಇದೇ ವೇಳೆ ಪರೀಕ್ಷಾ ಹಾಸನ ಜಿಲ್ಲೆ ಟಿ. ನರಸೀಪುರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ 10ನೇ ತರಗತಿ ವಿದ್ಯಾರ್ಥಿನಿ ಅನುಶ್ರೀ (16) ಅಕಾಲಿಕ ಹಠಾತ್ ಸಾವಿಗೆ ಸಚಿವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಓದಿ ಸುಂದರ ಭವಿಷ್ಯವನ್ನು ಕಟ್ಟಿಕೊಳ್ಳಬೇಕಿದ್ದ ವಿದ್ಯಾರ್ಥಿನಿಯ ಅಕಾಲಿಕ ಸಾವು ತೀವ್ರ ನೋವುಂಟು ಮಾಡಿದೆ. ಆಕೆಯನ್ನು ಕಳೆದುಕೊಂಡ ಪಾಲಕರು, ಸಂಬಂಧಿಕರು, ಸ್ನೇಹಿತರಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.
0 comments:
Post a Comment