ಬಂಟ್ವಾಳ, ಮಾರ್ಚ್ 31, 2022 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಹೃದಯ ಪಟ್ಟಣವಾಗಿರುವ ಬಿ ಸಿ ರೋಡು ಪೇಟೆಯಲ್ಲಿ ಕಳೆದ ಒಂದೆರಡು ತಿಂಗಳುಗಳಿಂದ ನಿರಂತರವಾಗಿ ಜೀವಜಲ ಪೋಲಾಗುತ್ತಿರುವ ಬಗ್ಗೆ ಕಳೆದ ಭಾನುವಾರ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿದ ಹಿನ್ನಲೆಯಲ್ಲಿ ಕೊನೆಗೂ ಸ್ಪಂದಿಸಿದ ಪುರಸಭಾಧಿಕಾರಿಗಳು ಗುರುವಾರ ದುರಸ್ತಿ ಕಾಮಗಾರಿ ಕೈಗೊಂಡಿದ್ದಾರೆ.
ಇಲ್ಲಿನ ವಾಸುದೇವ ಪ್ಲಾಝಾ ಮುಂಭಾಗದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾನಿಯಾಗಿ ಕೆಲ ತಿಂಗಳುಗಳಿಂದ ನಿರಂತರವಾಗಿ ಜೀವಜಲ ಪೋಲಾಗುತ್ತಿತ್ತು. ಕಠಿಣ ಬೇಸಿಗಯಲ್ಲೇ ಜೀವಜಲ ಪೋಲಾಗುತ್ತಿರುವ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಪತ್ರಿಕೆಯ ಗಮನಕ್ಕೂ ತಂದಿದ್ದರು.
ಈ ಪರಿಸರದಲ್ಲಿ ಇತ್ತೀಚೆಗೆ ರಸ್ತೆಯ ಅಂಚಿನ ಇಳಿಜಾರು ಪ್ರದೇಶದ ಸಮತಟ್ಟುಗೊಳಿಸುವ ಕಾಮಗಾರಿ ನಡೆದಿದ್ದು, ಈ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಲೈನಿಗೆ ಹಾನಿ ಉಂಟಾಗಿ ಈ ರೀತಿಯ ಸನ್ನಿವೇಶ ನಿರ್ಮಾಣವಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕಿಸಿದ್ದರು.
ಸ್ಥಳೀಯರ ದೂರಿಗೆ ಧ್ವನಿಯಾಗಿ ಪತ್ರಿಕೆ ಮಾ 27 ರಂದು ರಾತ್ರಿ ವೇಳೆಯೂ ನೀರು ಪೋಲಾಗುತ್ತಿರುವ ಬಗ್ಗೆ ಸಚಿತ್ರ ವರದಿ ಪ್ರಕಟಿಸಿ ಪುರಸಭಾಡಳಿತ ಹಾಗೂ ಅಧಿಕಾರಿ ವರ್ಗ, ಜನಪ್ರತಿನಿಧಿಗಳನ್ನು ಎಚ್ಚರಿಸಿತ್ತು. ಈ ಹಿನ್ನಲೆಯಲ್ಲಿ ಗುರುವಾರ ಬೆಳಿಗ್ಗೆ ಪುರಸಭಾ ವತಿಯಿಂದ ಇಲ್ಲಿನ ಪೈಪ್ ಲೈನಿಗೆ ಆಗಿರುವ ಹಾನಿಯ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ನಿಟ್ಟುಸಿರುವ ಬಿಟ್ಟಿದ್ದಾರೆ.
0 comments:
Post a Comment