ಬಂಟ್ವಾಳ, ಮಾರ್ಚ್ 27, 2022 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಹೃದಯ ಪಟ್ಟಣವಾಗಿರುವ ಬಿ ಸಿ ರೋಡು ಪೇಟೆಯಲ್ಲಿ ಕಳೆದ ಒಂದೆರಡು ತಿಂಗಳುಗಳಿಂದ ನಿರಂತರವಾಗಿ ಜೀವಜಲ ಪೋಲಾಗುತ್ತಿದ್ದು, ಸಾರ್ವಜನಿಕರು ತೀವ್ರ ಕಿರಿಕಿರಿ ಅನುಭವಿಸುತ್ತಿರುವುದರ ಜೊತೆಗೆ ಕಠಿಣ ಬೇಸಿಗಯಲ್ಲೇ ಜೀವಜಲ ಪೋಲಾಗುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ವಾಸುದೇವ ಪ್ಲಾಝಾ ಮುಂಭಾಗದಲ್ಲಿ ಈ ರೀತಿ ಜೀವಜಲ ಪೋಲಾಗಲು ಪ್ರಾರಂಭವಾಗಿ ಸುಮಾರು 2-3 ತಿಂಗಳುಗಳೇ ಕಳೆಯುತ್ತಿದೆ. ಆದರೂ ಸ್ಥಳೀಯಾಡಳಿತವಾಗಲೀ, ಅಧಿಕಾರಿ ವರ್ಗವಾಗಲೀ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಈ ಪರಿಸರದಲ್ಲಿ ಇತ್ತೀಚೆಗೆ ರಸ್ತೆಯ ಅಂಚಿನ ಇಳಿಜಾರು ಪ್ರದೇಶದ ಸಮತಟ್ಟುಗೊಳಿಸುವ ಕಾಮಗಾರಿ ನಡೆದಿದ್ದು, ಈ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಲೈನಿಗೆ ಹಾನಿ ಉಂಟಾಗಿ ಈ ರೀತಿಯ ಸನ್ನಿವೇಶ ನಿರ್ಮಾಣವಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.
ಇಲ್ಲಿನ ಇಳಿಜಾರು ಸ್ಥಿತಿಯನ್ನು ಸಮತಟ್ಟುಗೊಳಿಸಿದ ಪರಿಣಾಮ ಹೆದ್ದಾರಿ ಬದಿಯಲ್ಲಿ ಸಾಕಷ್ಟು ಸ್ಥಳಾವಕಾಶ ಒದಗಿ ಬಂದಿದ್ದರೂ ನೀರು ಪೋಲಾಗಿ ಕೆಸರುಮಯ ಪರಿಸ್ಥಿತಿ ಉಂಟಾಗಿರುವುದರಿಂದ ಮಂಗಳೂರು ಕಡೆಯಿಂದ ಬರುವ ಬಸ್ಸುಗಳು ಇದೇ ಜಾಗದಲ್ಲಿ ನಿಲುಗಡೆ ನೀಡುತ್ತಿದ್ದು, ಇಲ್ಲಿ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಕೂಡಾ ನಿಲ್ಲುವಂತಹ ಪರಿಸ್ಥಿತಿ ಇಲ್ಲ. ಕೆಲವೊಮ್ಮೆ ನೀರಿನ ರಭಸ ಹೆಚ್ಚಿರುವ ಸಂದರ್ಭ ಈ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಸ್ಥಳೀಯ ಅಂಗಡಿ ಮಾಲಕರ ಸಹಿತ ಪಾದಚಾರಿ ಸಾರ್ವಜನಿಕರೂ ಕೂಡಾ ಇಲ್ಲಿನ ನಿರಂತರ ನೀರು ಪೋಲಾಗುವ ಸನ್ನಿವೇಶದಿಂದಾಗಿ ತೀವ್ರ ಅನಾನುಕೂಲತೆ ಎದುರಿಸುತ್ತಿರುವುದು ಕಂಡು ಬರುತ್ತಿದೆ.
ತಕ್ಷಣ ಪುರಸಭಾಡಳಿತ ಹಾಗೂ ಅಧಿಕಾರಿ ವರ್ಗ ಇಲ್ಲಿನ ಜೀವಜಲ ಪೋಲಾಗುತ್ತಿರುವ ಪರಿಸ್ಥಿತಿಗೆ ಸೂಕ್ತ ಕಾಯಕಲ್ಪ ಒದಗಿಸಿ ಸಾರ್ವಜನಿಕರಿಗೆ ತೊಂದರೆಮುಕ್ತ ಸನ್ನಿವೇಶ ನಿರ್ಮಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
0 comments:
Post a Comment