ನಾಳೆಯೇ ಚುನಾವಣೆ ನಡೆದರೂ ಎದುರಿಸಲು ಕೈ ಪಾಳಯ ಸಿದ್ದ, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ : ಕೆಪಿಸಿಸಿ ಅಧ್ಯಕ್ಷರ ಉವಾಚ
ಬೆಂಗಳೂರು, ಮಾರ್ಚ್ 30, 2022 (ಕರಾವಳಿ ಟೈಮ್ಸ್) : ರಾಜ್ಯ ಕಾಂಗ್ರೆಸ್ಸಿನಲ್ಲಿ ಯಾವುದೇ ಬಣಗಳಿಲ್ಲ. ಎಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ವಿಧಾನಸಭೆ ಚುನಾವಣೆಯನ್ನೂ ಸಾಮೂಹಿಕ ನಾಯಕತ್ವದಲ್ಲೇ ಎದುರಿಸುತ್ತೇವೆ. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದ್ದು, ಎಲ್ಲಾ ಮುಂಚೂಣಿ ಘಟಕಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಡರ್ ಪಾರ್ಟಿ ಮಾಡಲೂ ಆದ್ಯತೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಮೂಲಗಳ ಪ್ರಕಾರ ರಾಜ್ಯದಲ್ಲಿ ನವೆಂಬರ್ 27ಕ್ಕೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಲು ಬಿಜೆಪಿ ಸಿದ್ದತೆ ನಡೆಸುತ್ತಿರುವುದು ತಿಳಿದು ಬಂದಿದೆ. ಯಾವಾಗ ಚುನಾವಣೆ ನಡೆಸಿದರೂ ಎದುರಿಸಲು ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ ಎಂದರು.
ನಾಳೆಯೇ ಚುನಾವಣೆ ನಡೆದರೂ ನಾವು ಸಿದ್ಧವಾಗಿದ್ದೇವೆ. ಅವಧಿಪೂರ್ವ ಚುನಾವಣೆ ಬಗ್ಗೆ ಮಾಹಿತಿ ಬಂದಿದೆ. ಅವರು ಯಾವಾಗ ಬೇಕಾದರೂ ಚುನಾವಣೆ ಮಾಡಲಿ, ಈ ತಿಂಗಳು ಮಾಡಲಿ ಅಥವಾ ನಾಳೆಯೇ ಮಾಡಲಿ. ನವೆಂಬರ್ 27ಕ್ಕೆ ಚುನಾವಣೆ ದಿನಾಂಕ ಪ್ರಕಟಿಸಲಿ. ಎಲ್ಲದಕ್ಕೂ ಕಾಂಗ್ರೆಸ್ ಪಕ್ಷ ಸರ್ವ ರೀತಿಯಲ್ಲೂ ಸಜ್ಜಾಗಿದೆ ಎನ್ನುವ ಮೂಲಕ ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಬಗ್ಗೆ ಮುನ್ಸೂಚನೆ ನೀಡಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್ ನೀಡಲಾಗುವುದು. ಜತೆಗೆ ಸ್ಥಳೀಯವಾಗಿ ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ನೀಡಲಾಗುವುದು ಎಂದು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.
0 comments:
Post a Comment