ಬೆಂಗಳೂರು, ಮಾರ್ಚ್ 15, 2022 (ಕರಾವಳಿ ಟೈಮ್ಸ್) : ಸರಕಾರದ ವಸ್ತ್ರ ಸಂಹಿತೆಯನ್ನು ಪ್ರಶ್ನೆ ಮಾಡುವ ಹಾಗಿಲ್ಲ, ಸಮವಸ್ತ್ರವನ್ನು ಕಡ್ಡಾಯ ಮಾಡುವುದು ಸಂವಿಧಾನದ 19(1)(ಎ) ಮತ್ತು 25ರ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ. ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ ಎಂದು ರಾಜ್ಯ ಹೈಕೋರ್ಟ್ ತ್ರಿಸದಸ್ಯ ಪೀಠ ಮಂಗಳವಾರ ತೀರ್ಪು ನೀಡಿ ಹಿಜಾಬ್ ಕುರಿತ ಅರ್ಜಿಯನ್ನು ವಜಾಗೊಳಿಸಿದೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಆವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್, ನ್ಯಾಯಮೂರ್ತಿ ಜೆ ಎಂ ಖಾಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಮಂಗಳವಾರ ಈ ತೀರ್ಪು ಪ್ರಕಟಿಸಿದೆ.
ಆರ್ಟಿಕಲ್ 19(1) (ಎ) (ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಲಂ 21 (ಗೌಪ್ಯತೆ) ಅಡಿಯಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ. ಶಾಲಾ ಸಮವಸ್ತ್ರವನ್ನು ಕಾನೂನುಬದ್ಧವಾಗಿ ಸರಕಾರ ಆದೇಶ ಜಾರಿಗೆ ತಂದಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಗೆ ಉತ್ತರಿಸಿರುವ ನ್ಯಾಯಾಲಯ, ಸರಕಾರ ಸೂಚಿಸುವ ಸಮವಸ್ತ್ರವು ಸಮಂಜಸವಾದ ನಿರ್ಬಂಧವಾಗಿದೆ, ಸಾಂವಿಧಾನಿಕವಾಗಿ ಅನುಮತಿಸಲಾಗಿದೆ ಇದನ್ನು ವಿದ್ಯಾರ್ಥಿಗಳು ಆಕ್ಷೇಪಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಫೆಬ್ರವರಿ 5 ರಂದು ಕರ್ನಾಟಕ ಸರಕಾರ ಸಮವಸ್ತ್ರ ಕುರಿತು ಹೊರಡಿಸಿರುವ ಆದೇಶವನ್ನು ಎತ್ತಿಹಿಡಿದಿರುವ ನ್ಯಾಯಾಲಯ, ತರಗತಿಯೊಳಗೆ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿದೆ. ಅರ್ಹತೆ ಇಲ್ಲದ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಾಲಯ, ಸಮವಸ್ತ್ರವನ್ನು ಸೂಚಿಸುವ ಆದೇಶವನ್ನು ಹೊರಡಿಸುವ ಅಧಿಕಾರವನ್ನು ಸರಕಾರ ಹೊಂದಿದೆ ಎಂದು ಹೇಳಿತು. ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡದ ಕಾಲೇಜಿನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಿರ್ದೇಶನ ನೀಡಲು ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.
0 comments:
Post a Comment