ಕಡಬ, ಮಾರ್ಚ್ 18, 2022 (ಕರಾವಳಿ ಟೈಮ್ಸ್) : ತಾಲೂಕಿನ ದೋಳ್ಪಾಡಿ ಗ್ರಾಮದ ಮರಕ್ಕಡ ನಿವಾಸಿ ಎಂ ದಿವಾಕರ ಎಂಬರ ಪುತ್ರ, 3ನೇ ತರಗತಿ ವಿದ್ಯಾರ್ಥಿ ಉಲ್ಲಾಸ್ (9) ಮನೆ ಸಮೀಪದ ಪೇರಳೆಹಣ್ಣು ಮರ ಏರಿದ್ದ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.
ದಿವಾಕರ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಈ ಪೈಕಿ ಕಿರಿಯ ಪುತ್ರ ಉಲ್ಲಾಸ್ ದೊಳ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಗುರುವಾರ ಸಂಜೆ ಶಾಲೆ ಬಿಟ್ಟು ಮನೆಗೆ ಬಂದು ಅಂಗಳದಲ್ಲಿ ತನ್ನ ಚಿಕ್ಕಪ್ಪನ ಮಗನೊಂದಿಗೆ ಸೇರಿ ಆಟವಾಡಿಕೊಂಡಿದ್ದನು. ಈ ವೇಳೆ ಬಾಲಕ ಉಲ್ಲಾಸ್ ಸಮೀಪದ ಪೇರಳ ಮರಕ್ಕೆ ಹತ್ತಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದು ತಲೆಯ ಹಿಂಬಾಗಕ್ಕೆ ಗಂಭೀರ ಏಟು ಬಿದ್ದು ಈ ಅವಘಡ ಸಂಭವಿಸಿದೆ.
ಘಟನೆ ಬಗ್ಗೆ ತಿಳಿಯುತ್ತಲೇ ತಕ್ಷಣ ಕೃಷಿ ಕೆಲಸದಿಂದ ಮನೆಗೆ ಬಂದ ಬಾಲಕನ ತಂದೆ ಆತನನ್ನು ಕಡಬ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2022 ಕಲಂ 174 ಸಿಆರ್‍ಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment