ಮೃತ ಶಾಲಾ ಬಾಲಕ ಅದ್ವೈತ್ ಡಿ ಶೆಟ್ಟಿ |
ಬಂಟ್ವಾಳ, ಮಾರ್ಚ್ 07, 2022 (ಕರಾವಳಿ ಟೈಮ್ಸ್) : ಶಾಲಾ ವಿದ್ಯಾರ್ಥಿ ಮಗನನ್ನು ಬೈಕಿನಲ್ಲಿ ಕರೆದುಕೊಂಡು ಬರುತ್ತಿದ್ದ ವೇಳೆ ಲಾರಿಯೊಂದು ಹಿಟ್ ಆಂಡ್ ರನ್ ನಡೆಸಿದ ಪರಿಣಾಮ ಶಾಲಾ ಬಾಲಕ ಮೃತಪಟ್ಟು ತಂದೆಯ ಗಾಯಗೊಂಡ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರಾಜೆ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಸೋಮವಾರ (ಮಾರ್ಚ್ 7) ಅಪರಾಹ್ನ 3.15 ರ ವೇಳೆಗೆ ನಡೆದಿದೆ.
ಸ್ಥಳೀಯ ನಿವಾಸಿ ದಿನೇಶ್ ಶೆಟ್ಟಿ ಅವರು ತನ್ನ ಪುತ್ರ, ಬುಡೋಳಿ ವಿಸ್ಡಂ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅದ್ವೈತ್ ಡಿ ಶೆಟ್ಟಿ (12) ಯನ್ನು ದ್ವಿಚಕ್ರ ವಾಹನದಲ್ಲಿ ಜೊತೆಯಾಗಿ ಕುಳ್ಳಿರಿಸಿಕೊಂಡು ಮನೆ ಕಡೆ ಹೊರಟಿದ್ದ ವೇಳೆ ಮಂಗಳೂರಿನಿಂದ ಬೆಂಗಳೂರು ಕಡೆ ಸಂಚರಿಸುತ್ತಿದ್ದ ಈಚರ್ ಲಾರಿ ವಾಹನವೊಂದನ್ನು ಓವರ್ ಟೇಕ್ ಮಾಡಿ ಎದುರಿನಿಂದ ಸಂಚರಿಸುತ್ತಿದ್ದ ದಿನೇಶ್ ಶೆಟ್ಟಿ ಅವರ ಬೈಕಿಗೆ ಹಿಂಭಾಗದಿಂದ ಹಿಡ್ ಆಂಡ್ ರನ್ ನಡೆಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ತಂದೆ-ಮಗ ವಾಹನ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ.
ತಕ್ಷಣ ಇವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಅದ್ವೈತ್ ಶೆಟ್ಟಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ತಂದೆ ದಿನೇಶ್ ಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಅಪಘಾತ ನಡೆಸಿದ ಬಳಿಕ ಈಚರ್ ಲಾರಿ ಚಾಲಕ ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಠಾಣೆಗೆ ಮಾಹಿತಿಯನ್ನೂ ನೀಡದೆ ಈಚರ್ ಲಾರಿಯೊಂದಿಗೆ ಪರಾರಿಯಾಗಿರುತ್ತಾನೆ.
ಈ ಬಗ್ಗೆ ವೀಕೇಶ್ ಕೆ ಎಂಬವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 40/2022 ಕಲಂ 279, 337, 304ಎ ಐಪಿಸಿಯಂತೆ ಹಾಗೂ 134ಎ&ಬಿ ಐಎಂವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment