ಬಂಟ್ವಾಳ ಮಾರ್ಚ್ 17, 2022 (ಕರಾವಳಿ ಟೈಮ್ಸ್) : ಹಿಜಾಬ್ ಧಾರಣೆ ಕುರಿತು ಕರ್ನಾಟಕ ಹೈಕೋರ್ಟ್ ಮಂಗಳವಾರ ನೀಡಿರುವ ತೀರ್ಪು ಸಂವಿಧಾನ ವಿರೋಧಿಯಾಗಿದ್ದು, ಈ ಬಗ್ಗೆ ಮುಸ್ಲಿಂ ಸಮುದಾಯ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಾಲೂಕಿನ ವಿವಿಧ ಸಂಘಟನೆಗಳು, ಮಸೀದಿ ಆಡಳಿತ ಮಂಡಳಿಗಳು ಗುರುವಾರ ಸ್ವಯಂಪ್ರೇರಿತ ಬಂದ್ ಆಚರಣೆಗೆ ಕರೆ ನೀಡಿದ ಹಿನ್ನಲೆಯಲ್ಲಿ ಬೆಳಿಗ್ಗಿನಿಂದಲೇ ಮುಸ್ಲಿಂ ವರ್ತಕರು ಸ್ವಯಂ ಬಂದ್ ಆಚರಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರ ಬಹುತೇಕ ಅಂಗಡಿ-ಮುಂಗಟ್ಟುಗಳು ಗುರುವಾರ ಬೆಳಿಗ್ಗೆಯಿಂದಲೇ ಬಂದ್ ಆಗಿದ್ದು, ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಕೆಲ ವಾಹನ ಮಾಲಕರು ಕೂಡಾ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿ ತಮ್ಮ ವಾಹನಗಳನ್ನು ರಸ್ತೆಗೆ ಇಳಿಸಲಿಲ್ಲ. ಖಾಸಗಿ ಕಾರ್ಯಕ್ರಮಗಳಿಗೆ ಹಾಗೂ ಸ್ವಂತ ದೈನಂದಿನ ಚಟುವಟಿಕೆ ಹೊರತುಪಡಿಸಿ ವಾಹನಗಳು ಸಾರ್ವಜನಿಕ ಸೇವೆಗೆ ಇಳಿಯಲಿಲ್ಲ. ತಾಲೂಕಿನ ಪ್ರತಿಯೊಂದು ಮಸೀದಿ-ಮೊಹಲ್ಲಾಗಳ ವ್ಯಾಪ್ತಿಯಲ್ಲಿ ಸ್ವಯಂಪ್ರೇರಿತ ಬಂದ್ ಆಚರಿಸುವಂತೆ ಕರೆ ನೀಡಿದ ಹಿನ್ನಲೆಯಲ್ಲಿ ಮುಸ್ಲಿಮರು ಸ್ವಯಂ ಬೆಂಬಲ ವ್ಯಕ್ತಪಡಿಸಿದರು. ಕೆಲವೊಂದು ಮುಸ್ಲಿಂ ಆಡಳಿತ ಹೊಂದಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದ್ದರೆ, ಪ್ರೌಢಶಾಲೆಗಳಲ್ಲಿ ಅಂತಿಮ ಪರೀಕ್ಷೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ದತಾ ಪರೀಕ್ಷೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದ ದೃಶ್ಯ ಕಂಡು ಬಂತು.
0 comments:
Post a Comment