ಬೆಂಗಳೂರು, ಮಾರ್ಚ್ 23, 2022 (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಹಾಗೂ ಲಾಕ್ ಡೌನ್ ಕಾರಣಕ್ಕಾಗಿ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುತ್ತಿದ್ದ ಹೆಚ್ಚುವರಿ ಅಕ್ಕಿ ಹಾಗೂ ಗೋಧಿ ವಿತರಣೆ ಎಪ್ರಿಲ್ ತಿಂಗಳಿನಿಂದ ರದ್ದಾಗಲಿದೆ.
ಕೊರೋನಾ ಹಾಗೂ ಲಾಕ್ ಡೌನ್ ಕಾರಣಕ್ಕಾಗಿ ಜನರಿಗೆ ಅನುಕೂಲ ಉಂಟುಮಾಡುವ ನಿಟ್ಟಿನಲ್ಲಿ ರಾಜ್ಯ ಸರಕಾರದ 5 ಕೆಜಿ ಅಕ್ಕಿ ಜೊತೆಗೆ ಕೇಂದ್ರ ಸರಕಾರ 5 ಕೆಜಿ ಅಕ್ಕಿ ಹಾಗೂ 2 ಕೆಜಿ ಗೋಧಿಯನ್ನು ಬಿಪಿಎಲ್ ಗ್ರಾಹಕರಿಗೆ ವಿತರಿಸಲಾಗುತ್ತಿತ್ತು. ಈ ವ್ಯವಸ್ಥೆಯನ್ನು 2022 ರ ಮಾರ್ಚ್ ತಿಂಗಳವರೆಗೆ ವಿಸ್ತರಿಸಿ ಸರಕಾರ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಇದೀಗ ಮಾರ್ಚ್ ತಿಂಗಳಲ್ಲೇ ಈ ಹೆಚ್ಚುವರಿ ರೇಶನ್ ಅಕ್ಕಿ ಕೊನೆಯಾಗಲಿದ್ದು, ಎಪ್ರಿಲ್ ತಿಂಗಳಿನಿಂದ ಕೇಂದ್ರ ಸರಕಾರ 5 ಕೆಜಿ ಅಕ್ಕಿ ಕೊನೆಯಾಗಲಿದ್ದು, ಗೋಧಿ ಬದಲಿಗೆ 1 ಕೆಜಿ ಅಕ್ಕಿ ಹೆಚ್ಚುವರಿಯಾಗಿ ವಿತರಿಸಲಾಗುವುದು. ರಾಜ್ಯ ಸರಕಾರದ 5 ಕೆಜಿ ಅಕ್ಕಿ ಜೊತೆಗೆ 1 ಕೆಜಿ ಹೆಚ್ಚುವರಿ ಅಕ್ಕಿ ಸಹಿತ ಒಟ್ಟು 6 ಕೆಜಿ ಅಕ್ಕಿ ಮಾತ್ರ ಎಪ್ರಿಲ್ ತಿಂಗಳಿನಿಂದ ಬಿಪಿಎಲ್ ಕಾರ್ಡ್ ದಾರರಿಗೆ ದೊರೆಯಲಿದೆ.
ಕೊರೋನಾ ಲಾಕ್ ಡೌನ್ ಕಾರಣದಿಂದ ಪಡಿತರ ಅಂಗಡಿಗಳಲ್ಲಿ ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರಕಾರದ ಕೋಟಾದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿ ಸದಸ್ಯನಿಗೆ 10 ಕೆ.ಜಿ. ಹಾಗೂ ಒಂದು ಪಡಿತರ ಕಾರ್ಡ್‍ಗೆ 2 ಕೆ.ಜಿ. ಗೋಧಿ ವಿತರಣೆ ಮಾಡಲಾಗುತ್ತಿತ್ತು. ಇದೀಗ ಕೇಂದ್ರ ಸರಕಾರದ 5 ಕೆಜಿ ಅಕ್ಕಿ ಸಹಿತ ಗೋಧಿಯೂ ರದ್ದಾಗುವುದರಿಂದ ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳು ಕೇವಲ ಅಕ್ಕಿಗೆ ಮಾತ್ರ ಸೀಮಿತವಾಗಲಿದೆ.
ಈ ಹಿಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ರೇಶನ್ ಸಾಮಾಗ್ರಿ ದೊರೆಯುತ್ತಿದ್ದುದರಿಂದ ಅದಕ್ಕೆ ರೇಶನ್ ಅಂಗಡಿ ಎಂದೇ ಕರೆಯಲಾಗುತ್ತಿತ್ತು. ಈ ಹಿಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಜೊತೆಗೆ ಸಕ್ಕರೆ, ಎಣ್ಣೆ ಮೊದಲಾದ ಸಾಮಾಗ್ರಿಗಳು ದೊರೆಯುತ್ತಿತ್ತು. ಇದೀಗ ಇದ್ದ ಗೋಧಿಯೂ ರದ್ದಾಗುವುದರಿಂದ ಮುಂದಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳು ರೇಶನ್ ಅಂಗಡಿ ಹೋಗಿ ಕೇವಲ ಅಕ್ಕಿ ವಿತರಣಾ ಕೇಂದ್ರ ಮಾತ್ರವಾಗಿ ಕಾರ್ಯನಿರ್ವಹಿಸಲಿದೆ.
ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಪ್ರತಿ ಕಾರ್ಡಿಗೆ ಇನ್ನು ಮುಂದೆ 15 ಕೆ ಜಿ ರಾಗಿ ವಿತರಣೆ ಮಾಡಲು ಸರಕಾರ ನಿರ್ಧರಿಸಿದೆ. ಎಫ್ರಿಲ್ ತಿಂಗಳಿನಿಂದಲೇ ರಾಗಿ ವಿತರಣೆ ಮಾಡುವ ಬಗ್ಗೆ ಸರಕಾರ ಹೇಳಿಕೊಂಡಿದೆ. ಅಂತ್ಯೋದಯ ಕಾರ್ಡಿಗೆ ಇದೀಗ ಒಟ್ಟು 35 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಇನ್ನು ಮುಂದೆ 20 ಕೆಜಿ ಅಕ್ಕಿಯೊಂದಿಗೆ 15 ಕೆಜಿ ರಾಗಿ ವಿತರಣೆಯಾಗಲಿದೆ ಎನ್ನಲಾಗಿದೆ.
0 comments:
Post a Comment