ಮಂಗಳೂರು, ಮಾರ್ಚ್ 19, 2022 (ಕರಾವಳಿ ಟೈಮ್ಸ್) : ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವುದನ್ನು ನಾವು ವಿರೋಧಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ವಿವಿಧೆಡೆ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶನಿವಾರ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿ, ವಿದ್ಯಾರ್ಥಿಗಳಿಗೆ ನೈತಿಕ ವಿದ್ಯೆ ಕಲಿಸುವುದಕ್ಕೆ ನಮ್ಮ ಯಾವುದೇ ತಕರಾರು ಅಥವಾ ವಿರೋಧವಿಲ್ಲ. ಆದರೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನಾದರೂ ಹೇಳಿಕೊಡಲಿ ಆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಷ್ಟೆ. ಸಂವಿಧಾನಕ್ಕೆ ವಿರುದ್ಧವಾಗಿ ಯಾವುದನ್ನೂ ಮಾಡಬಾರದು. ನಮ್ಮದು ಬಹು ಸಂಸ್ಕೃತಿ, ಬಹುತ್ವ ಇರುವ ರಾಷ್ಟ್ರ, ಸಹಿಷ್ಣುತೆ, ಸಹಬಾಳ್ವೆ ಮೇಲೆ ನಂಬಿಕೆ ಇಟ್ಟುಕೊಂಡಿರಬೇಕು ಎಂದವರು ಅಭಿಪ್ರಾಯಪಟ್ಟರು.
ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡಿರುವವರು, ಸಾಫ್ಟ್ ಹಿಂದುತ್ವನೂ ಇಲ್ಲ, ಹಾರ್ಡ್ ಹಿಂದುತ್ವನೂ ಇಲ್ಲ, ನಾವು ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುತ್ತೇವೆ ಎಂದು ಮಾಜಿ ಸಿಎಂ ಹೇಳಿದರು.
ಹಿಜಾಬ್ ವಿವಾದ ಕುರಿತು ಅಸಮಾಧಾನ ಇರುವವರು ಕರ್ನಾಟಕ ಬಂದ್ ಮಾಡಿಕೊಂಡಿದ್ದಾರೆ. ನಾವು ಕೋರ್ಟ್ ತೀರ್ಪನ್ನು ಅನುಸರಿಸಬೇಕು, ಯಾವ ಧರ್ಮದವರಾದರೂ ಕೋಮುವಾದ ಮಾಡಬಾರದು, ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣಬೇಕು ಎಂದರು.
ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಮಾತನಾಡಿದ ಅವರು ಯಾವ ಸಿನಿಮಾನಾದ್ರೂ ತೋರಿಸಲಿ, ಸತ್ಯ ತೋರಿಸಲಿ. ಕಾಶ್ಮೀರದಲ್ಲಿ ಯಾರಿಗೆ ಸಮಸ್ಯೆ ಆಗಿತ್ತೆಂದು ಹೇಳಬೇಕು. ಕಾಶ್ಮೀರದಲ್ಲಿ ಉಗ್ರರ ಕೃತ್ಯ, ಕಾಶ್ಮೀರ ಪಂಡಿತರ ಸಮಸ್ಯೆ, ಬೇರೆ ಯಾರಿಗೆ ಸಮಸ್ಯೆ ಆಗಿತ್ತು ಎಂಬುದನ್ನು ಹೇಳಬೇಕು. ಆಗ ಅಲ್ಲಿ ಯಾರ ಸರಕಾರವಿತ್ತು, ಸರಕಾರ ಈ ಸಂದರ್ಭ ಏನು ಮಾಡಿತು. ಗುಜರಾತ್ ಘಟನೆ, ಲಖೀಂಪುರ ಘಟನೆ ಎಲ್ಲವೂ ತೋರಿಸಲಿ ಎಂದರು.
0 comments:
Post a Comment