ಉಡುಪಿ, ಮಾರ್ಚ್ 19, 2022 (ಕರಾವಳಿ ಟೈಮ್ಸ್) : ಈ ದೇಶದಲ್ಲಿ ಎಲ್ಲರೂ ಸ್ವತಂತ್ರರು, ನಮ್ಮದು ಸ್ವತಂತ್ರ ಭಾರತ ದೇಶವಾಗಿದೆ. ಯಾರು ಯಾರಿಗೂ ಬೆದರಿಕೆ ಹಾಕುವಂತಿಲ್ಲ. ವ್ಯಾಪಾರ ವಹಿವಾಟು ನಡೆಸಲು ಬೆದರಿಕೆ ಹಾಕುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲೆ ಹಿರಿಯಡ್ಕದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಸಲ್ಮಾನರಿಗೆ ವ್ಯಾಪಾರ ಬಹಿಷ್ಕಾರ ವಿಚಾರ ಖಂಡನೀಯವಾಗಿದೆ. ಕಾನೂನು ಇದಕ್ಕೆ ಅವಕಾಶ ಕೊಡುವುದಿಲ್ಲ. ಯಾರದೇ ಜಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಮನೆಯ ಒಳಗಿನ ಖಾಸಗಿ ಕಾರ್ಯಕ್ರಮವಾದರೆ ಯಾವುದೇ ನಿರ್ಬಂಧ ಹಾಕಿಕೊಳ್ಳಿ ತೊಂದರೆ ಇಲ್ಲ. ಆದರೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಧರ್ಮ-ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ದೇಶದ ಸೌಹಾರ್ದತೆಗೆ ಕೊಳ್ಳಿ ಇರುವ ಕ್ರಮ ಕಾನೂನು ವಿರುದ್ಧವಾದ ನಡವಳಿಕೆ. ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಡಿಕೆಶಿ ಕಾಂಗ್ರೆಸ್ ಮುಗಿಸುತ್ತಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳುತ್ತಿದ್ದಾರೆ ಎನ್ನುವ ಬಗ್ಗೆ ಪ್ರತಿಕ್ರಯಿಸಿದ ಸಿದ್ದು, ಮೊದಲು ಆಯಮ್ಮ ಬಿಜೆಪಿಯನ್ನು ಮುಗಿಸದಿದ್ದರೆ ಸಾಕು ಎಂದು ತಿರುಗೇಟು ನೀಡಿದರು.
ಚುನಾವಣೆಗೆ ರಾಜ್ಯದ ಅಭಿವೃದ್ದಿ ವಿಚಾರಗಳನ್ನು ಮುಂದಿಟ್ಟು ಬಿಜೆಪಿ ಮತಬೇಟೆ ನಡೆಸಲಿ. ಸರಕಾರದ ಮೂರು ವರ್ಷದ ಸಾಧನೆಯನ್ನು ಇವರು ಚುನಾವಣೆಯ ವಿಷಯ ಮಾಡಲಿ. ಭಾವನಾತ್ಮಕ ವಿಚಾರಗಳನ್ನು ಚುನಾವಣೆಗೆ ತರಬೇಡಿ ಎಂದು ಬಿಜೆಪಿ ಹಿಂದೂ ಅಸ್ತ್ರಕ್ಕೆ ಸಿದ್ದರಾಮಯ್ಯ ಇದೇ ವೇಳೆ ತೀಕ್ಷ್ಣವಾಗಿ ಪ್ರತಿಕ್ರಯಿಸಿದರು.
0 comments:
Post a Comment