ಲಂಡನ್, ಮಾರ್ಚ್ 11, 2022 (ಕರಾವಳಿ ಟೈಮ್ಸ್) : ಕ್ರಿಕೆಟ್ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಕ್ರಿಕೆಟ್ ನಿಯಮಗಳ ರಚನೆ ಹಾಗೂ ತಿದ್ದುಪಡಿ ಮಾಡುವ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಈ ಬದಲಾವಣೆ ಮಾಡಿ ಘೋಷಿಸಿದೆ. ಹೊಸ ನಿಯಮಗಳು 2022ರ ಅಕ್ಟೋಬರ್ ತಿಂಗಳಿನಿಂದ ಜಾರಿಗೆ ಬರಲಿವೆ.
ಬದಲಾದ ಕ್ರಿಕೆಟ್ ನಿಯಮಗಳ ಪ್ರಕಾರ ಇನ್ನು ಮುಂದೆ ಬ್ಯಾಟ್ಸ್‍ಮೆನ್ ಕ್ಯಾಚ್ ನೀಡಿ ಔಟಾದರೆ ಹೊಸದಾಗಿ ಕ್ರೀಸಿಗೆ ಬರುವ ಆಟಗಾರನೇ ಸ್ಟ್ರೈಕ್ ಕಡೆ ದಾಂಡುಗಾರಿಕೆ ನಡೆಸಬೇಕು. ಓವರಿನ ಕೊನೆ ಎಸೆತವಾಗಿದ್ದರಷ್ಟೇ ಸ್ಟ್ರೈಕ್ ಬದಲಾವಣೆಗೆ ಅವಕಾಶವಿರಲಿದೆ. ಸದ್ಯ ಚಾಲ್ತಿಯಲ್ಲಿರುವ ನಿಯಮದ ಪ್ರಕಾರ ಚೆಂಡನ್ನು ಕ್ಷೇತ್ರ ರಕ್ಷಕ ಕ್ಯಾಚ್ ಹಿಡಿಯುವ ಮೊದಲು ಸ್ಟ್ರೈಕರ್ ಹಾಗೂ ಹಾಗೂ ನಾನ್ ಸ್ಟ್ರೈಕರ್ ದಾಂಡುಗಾರರು ಒಬ್ಬರನ್ನೊಬ್ಬರು ಕ್ರೀಸಿನಲ್ಲಿ ದಾಟಿದ್ದರೆ, ಮುಂದಿನ ಎಸೆತವನ್ನು ನಾನ್ ಸ್ಟ್ರೈಕ್ ಬದಿಯಿಂದ ಸ್ಟ್ರೈಕ್ ಪಡೆಯುವ ಬದಿಗೆ ತೆರಳಿರುವ ಆಟಗಾರ ಎದುರಿಸಬೇಕಿತ್ತು. ಆದರೆ ಇದೀಗ ಬದಲಾದ ನಿಯಮದಂತೆ ಹೊಸದಾಗಿ ಕ್ರೀಸ್‍ಗಿಳಿಯುವ ಆಟಗಾರನೇ ಸ್ಟ್ರೈಕ್ ಪಡೆಯಬೇಕಿದೆ.
ಮಂಕಡಿಂಗ್ ಬೌಲಿಂಗಿಗೂ ಇದೀಗ ಬದಲಾದ ನಿಯಮದ ಪ್ರಕಾರ ಅಧಿಕೃತ ಮುದ್ರೆ ಒತ್ತಲಾಗಿದೆ. ಇನ್ನು ಮುಂದೆ ಮನಕಡಿಂಗ್ (ಬೌಲರ್ ಬೌಲ್ ಮಾಡುವ ಮೊದಲೇ ನಾನ್ ಸ್ಟ್ರೈಕರ್ ಕ್ರೀಸ್ ಬಿಟ್ಟಾಗ ಬೌಲರ್ ಮಾಡುವ ರನೌಟ್) ಮಾಡುವುದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಲ್ಲ. ಮನಕಡಿಂಗ್ ಔಟನ್ನು ರನೌಟ್ ವ್ಯಾಪ್ತಿಗೆ ಪರಿಗಣಿಸಲು ಎಂಸಿಸಿ ನೂತನ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಚೆಂಡಿಗೆ ಎಂಜಲು ಬಳಕೆಗೆ ನೂತನ ನಿಯಮದಲ್ಲಿ ನಿಷೇಧ ಹೇರಲಾಗಿದೆ. ಕೋವಿಡ್ ಕಾರಣದಿಂದಾಗಿ ಎಂಜಲು ಬಳಕೆ ಮಾಡದಂತೆ ಎಲ್ಲಾ ತಂಡಗಳಿಗೆ ಸೂಚಿಸಲಾಗಿತ್ತು. ಈಗ ಅದನ್ನು ನಿಯಮವಾಗಿ ರೂಪಿಸಲಾಗಿದೆ. ಎಂಜಲು ಹಾಕುವುದರಿಂದ ಸ್ವಿಂಗ್ ಬೌಲಿಂಗ್‍ಗೆ ನೆರವಾಗುವುದಿಲ್ಲ ಎನ್ನುವುದು ಸಂಶೋಧನೆಯಿಂದ ದೃಢಪಟ್ಟಿರುವುದಾಗಿ ಹೇಳಿರುವ ಎಂಸಿಸಿ, ಚೆಂಡಿನ ಹೊಳಪು ಕಾಪಾಡಲು ತಂಡಗಳು ಬೆವರನ್ನು ಬಳಕೆ ಮಾಡುವುದನ್ನು ಮುಂದುವರಿಸಲು ಸೂಚಿಸಿದೆ. ಇನ್ನು ಮುಂದೆ ಎಂಜಲು ಬಳಕೆ ಮಾಡಿದರೆ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಆಟಗಾರರು ಗುರಿಯಾಗಲಿದ್ದಾರೆ.
ಎಂಸಿಸಿಯ ನೂತನ ನಿಯಮದಂತೆ ವೈಡ್ ನಿಯಮವೂ ಬದಲಾಗಲಿದೆ. ಬೌಲರ್ ಚೆಂಡನ್ನು ಬೌಲ್ ಮಾಡುವಾಗ ಬ್ಯಾಟ್ಸ್‍ಮೆನ್ ಪಿಚ್‍ನಲ್ಲಿ ಅತ್ತಿತ್ತ ಓಡಾಡಿ ಚೆಂಡನ್ನು ಹೊಡೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಕೆಲವೊಮ್ಮೆ ಬ್ಯಾಟ್ಸ್‍ಮೆನ್ ಗಳನ್ನು ವಂಚಿಸಲು ಬೌಲರ್‍ಗಳು ಆಫ್ ಸ್ಟಂಪ್‍ನಿಂದ ಹೊರಕ್ಕೆಸೆದ ಚೆಂಡು, ಕ್ರೀಸ್‍ನಿಂದ ಹೊರಗೆ ಹೋದ ಕಾರಣ ಅಂಪೈರ್ ವೈಡ್ ಎಂದು ಘೋಷಿಸುತ್ತಿದ್ದರು. ಆದರೆ ಇನ್ನು ಹೊಸ ನಿಯಮದಂತೆ ಬ್ಯಾಟ್ಸ್‍ಮೆನ್ ಚೆಂಡನ್ನು ಎಲ್ಲಿ ನಿಂತು ಎದುರಿಸುತ್ತಾನೆ ಎನ್ನುವುದರ ಆಧಾರದಲ್ಲಿ ವೈಡ್ ನಿರ್ಧಾರವಾಗಲಿದೆ. ವೈಡ್ ನೀಡುವ ಬಗ್ಗೆ ಅಂಪೈರ್ ತೀರ್ಮಾನಿಸಲಿದ್ದಾರೆ. ಎಂಸಿಸಿಯ ಈ ನಿಯಮಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಇದೊಂದು ವಿವಾದಾತ್ಮಕ ನಿಯಮ ಎಂಬ ಚರ್ಚೆಗಳು ಆರಂಭವಾಗಿದೆ.
ಇದಲ್ಲದೆ ಇನ್ನೂ ಅನೇಕ ಹೊಸ ನಿಯಮಗಳನ್ನು ಎಂಸಿಸಿ ಪರಿಚಯಿಸಿದೆ. ಪಂದ್ಯದ ವೇಳೆ ಬದಲಿ ಆಟಗಾರನಾಗಿ ಮೈದಾನಕ್ಕಿಳಿಯವ ಆಟಗಾರನಿಗೆ ಕ್ಯಾಚ್ ಇಲ್ಲವೇ ರನೌಟ್ ಶ್ರೇಯ ಸಿಗಲಿದೆ. ಅನುಚಿತ ವರ್ತನೆ ತೋರಿದರೆ ಶಿಕ್ಷೆಗೂ ಗುರಿಯಾಗಬಹುದು.
ಬೌಲರ್ ಬೌಲ್ ಮಾಡಿದಾಗ ಚೆಂಡು ಪಿಚ್ ನಿಂದ ಹೊರಬಿದ್ದರೆ ಅದನ್ನು ಬ್ಯಾಟ್ಸ್‍ಮೆನ್ ಆಡಲು ಅವಕಾಶವಿರಲಿದೆ. ಆದರೆ ಬ್ಯಾಟ್ಸ್‍ಮೆನ್‍ನ ದೇಹ ಇಲ್ಲವೇ ಬ್ಯಾಟಿನ ಭಾಗ ಪಿಚ್‍ನೊಳಗಿರಬೇಕು. ಈ ವರೆಗೂ ಚೆಂಡು ಎಷ್ಟೇ ದೂರಕ್ಕೆ ಹೋದರೂ ಬ್ಯಾಟ್ಸ್‍ಮೆನ್ ಹೋಗಿ ಆಡಬಹುದಿತ್ತು.
ಆಟದ ವೇಳೆ ಕ್ಷೇತ್ರರಕ್ಷಕರು ಅನಗತ್ಯವಾಗಿ ತಮ್ಮ ಸ್ಥಾನಗಳಿಂದ ಬೇರೊಂದು ಸ್ಥಳಕ್ಕೆ ಓಡಾಡಿ ಅದರಿಂದ ಬ್ಯಾಟ್ಸ್‍ಮೆನ್‍ಗೆ ತೊಂದರೆಯಾದರೆ, ಬ್ಯಾಟ್ ಮಾಡುತ್ತಿರುವ ತಂಡಕ್ಕೆ 5 ಪೆನಾಲ್ಟಿ ರನ್‍ಗಳು ದೊರೆಯಲಿವೆ. ಇದುವರೆಗೆ ಆ ಎಸೆತವನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತಿತ್ತು.
ಆಟದ ವೇಳೆ ಹೊರಗಿನಿಂದ ಮನುಷ್ಯರು ಅಥವಾ ಪ್ರಾಣಿಗಳು ಮೈದಾನಕ್ಕೆ ನುಗ್ಗಿ ಅದರಿಂದ ಆಟಕ್ಕೆ ತೊಂದರೆಯಾದರೆ, ಆ ಎಸೆತವನ್ನು ಡೆಡ್ ಬಾಲ್ ಎಂದು ಪರಿಗಣಿಸಲಾಗುತ್ತದೆ.
0 comments:
Post a Comment