ಚೀನಾದಲ್ಲಿ ಮತ್ತೆ ಕೊರೋನಾರ್ಭಟ : ಕಠಿಣ ಲಾಕ್ ಡೌನ್ ಘೋಷಿಸಿದ ಚೀನಾ ಸರಕಾರ, ಭಾರತ ಸಹಿತ ಇತರ ದೇಶಗಳಿಗೂ ವ್ಯಾಪಿಸಿದ ಆತಂಕ! - Karavali Times ಚೀನಾದಲ್ಲಿ ಮತ್ತೆ ಕೊರೋನಾರ್ಭಟ : ಕಠಿಣ ಲಾಕ್ ಡೌನ್ ಘೋಷಿಸಿದ ಚೀನಾ ಸರಕಾರ, ಭಾರತ ಸಹಿತ ಇತರ ದೇಶಗಳಿಗೂ ವ್ಯಾಪಿಸಿದ ಆತಂಕ! - Karavali Times

728x90

11 March 2022

ಚೀನಾದಲ್ಲಿ ಮತ್ತೆ ಕೊರೋನಾರ್ಭಟ : ಕಠಿಣ ಲಾಕ್ ಡೌನ್ ಘೋಷಿಸಿದ ಚೀನಾ ಸರಕಾರ, ಭಾರತ ಸಹಿತ ಇತರ ದೇಶಗಳಿಗೂ ವ್ಯಾಪಿಸಿದ ಆತಂಕ!

ಬೀಜಿಂಗ್, ಮಾರ್ಚ್ 11, 2022 (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ಮೊತ್ತ ಮೊದಲ ಬಾರಿಗೆ ಪತ್ತೆಯಾಗಿದ್ದ ಚೀನಾ ದೇಶದಲ್ಲಿ ಇದೀಗ ಮತ್ತೆ ಆಘಾತಕಾರಿ ಸುದ್ದಿ ಕೇಳಿ ಬರುತ್ತಿದೆ. ಕಳೆದೆರಡು ವರ್ಷಗಳಿಂದ ಕೊರೋನಾರ್ಭಟಕ್ಕೆ ನಲುಗಿ ಹೋಗಿದ್ದ ಜಗತ್ತು ತೀರಾ ಇತ್ತೀಚೆಗೆಯಷ್ಟೆ ವೈರಸ್ ಪ್ರಭಾವ ಒಂದಷ್ಟು ಕಡಿಮೆಯಾಗಿ ಭಾರತ ಸೇರಿದಂತೆ ವಿಶ್ವದಲ್ಲಿ ಆರ್ಥಿಕ ಚಟುವಟಿಕೆಗಳು ಚುರುಕುಗೊಂಡಿತ್ತು. ಕಳೆದ 2 ವರ್ಷಗಳಿಂದ ಭಾರತದಲ್ಲಿ ನಿರ್ಬಂಧಿಸಲಾಗಿದ್ದ ಅಂತಾರಾಷ್ಟ್ರೀಯ ವಿಮಾನಯಾನವನ್ನು ಕೂಡಾ ಪುನರಾರಂಭಿಸಲು ವಿಮಾನಯಾನ ಸಂಸ್ಥೆ ಗ್ರೀನ್ ಸಿಗ್ನಲ್ ನೀಡಲು ಚಿಂತನೆ ನಡೆಸಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇದೀಗ ಚೀನಾದಲ್ಲಿ ಮತ್ತೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಚೀನಾದ ಚಾಂಗ್‍ಚನ್ ಪ್ರಾಂತ್ಯದಲ್ಲಿ ಕೊರೋನಾ ಸ್ಫೋಟಗೊಂಡಿದೆ. ಅತೀ ವೇಗದಲ್ಲಿ ಕೊರೋನಾ ಹರಡುತ್ತಿದೆ. ಹೀಗಾಗಿ ಚೀನಾ ಸರಕಾರ ಕಠಿಣ ಲಾಕ್‍ಡೌನ್ ಕೂಡಾ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ. 

ಚಾಂಗ್‍ಚನ್ ಪ್ರಾಂತ್ಯದ ಹಲವು ನಗರಗಳಲ್ಲಿ ಕೊರೋನಾ ಸ್ಫೋಟಗೊಂಡಿದೆ. ದಿಢೀರ್ ಪ್ರಮುಖ ನಗರಗಳಲ್ಲಿ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ ಪತ್ತೆಯಾಗಿದೆ. ಇದು ಕಳೆದೆರಡು ವರ್ಷಕ್ಕೆ ಹೋಲಿಸಿದರೆ ಚೀನಾದಲ್ಲಿ ಕ್ಷಿಪ್ರಗತಿಯಲ್ಲಿ ಅತೀ ದೊಡ್ಡ ಕೊರೋನಾ ಸ್ಫೋಟ ಎಂದು ಹೇಳಲಾಗುತ್ತಿದೆ. ವೈರಸ್ ಅತೀ ವೇಗವಾಗಿ ಹರಡುತ್ತಿರುವ ಕಾರಣ ಚೀನಾ ಸರಕಾರ ತಕ್ಷಣದಿಂದಲೇ ಕಠಿಣ ಲಾಕ್‍ಡೌನ್ ಘೋಷಿಸಿಕೊಂಡಿದೆ. ಚಾಂಗ್‍ಚನ್ ಪ್ರಾಂತ್ಯ, ಜಿಲಿನ್ ಪ್ರಾಂತ್ಯದಲ್ಲಿ ಲಾಕ್‍ಡೌನ್ ಹೇರಲಾಗಿದೆ. ವೇಗವಾಗಿ ಹರಡುತ್ತಿರುವ ಕೊರೋನಾ ನಿಯಂತ್ರಿಸಲು ಎಲ್ಲಾ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಯಾರು ಕೂಡ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ನಿರ್ಬಂಧಿಸಲಾಗಿದೆ.

ಹೊರಗೆ ಬರುವ ವ್ಯಕ್ತಿಗಳು ಮೂರು ಸುತ್ತಿನ ಕೊರೋನಾ ತಪಾಸಣೆ ಹಾಗೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜಿಲಿನ್ ಹಾಗೂ ಚಾಂಗ್‍ಚನ್ ಪ್ರಾಂತ್ಯದಲ್ಲಿ ಕೊರೋನಾ ಸ್ಫೋಟಗೊಂಡಿದ್ದರೆ, ವಾಣಿಜ್ಯ ನಗರ ಎಂದೇ ಗುರುತಿಸಿಕೊಂಡಿರುವ ಶಾಂಘೈನಲ್ಲಿ ಓಮಿಕ್ರಾನ್ ಅಬ್ಬರ ಹೆಚ್ಚಾಗಿದೆ. ಹೀಗಾಗಿ ಶಾಲಾ ಕಾಲೇಜುಗಳನ್ನು ಕೂಡಾ ಬಂದ್ ಮಾಡಲಾಗಿದೆ. ಚಾಂಗ್‍ಚನ್ ಪ್ರಾಂತ್ಯದಲ್ಲಿ 3 ವಾರಗಳ ಹಿಂದೆ 100 ಹೊಸ ಪ್ರಕರಣಗಳು ಪತ್ತೆಯಾಗಿತ್ತು. ಇದೀಗ 1,000 ಗಡಿ ತಲುಪಿದೆ. ಮಾ. 11 ರಂದು ಅಂದರೆ ಇಂದು 1,369 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ. ಚೀನಾ ರಾಜಧಾನಿ ಬೀಜಿಂಗ್ ಪಟ್ಟಣದ ಕೆಲ ಪ್ರದೇಶಗಳಲ್ಲಿ ಭಾಗಶಃ ಲಾಕ್‍ಡೌನ್ ಘೋಷಿಸಲಾಗಿದೆ ಎಂದು ಚೀನಾ ಹೇಳಿಕೊಂಡಿದೆ. ವಿಶ್ವದ ಇತರ ರಾಷ್ಟ್ರಗಳಿಗೂ ಆತಂಕ ಶುರುವಾಗಿದೆ. ಭಾರತ ಈಗಷ್ಟೇ ಮೂರನೇ ಅಲೆಯಿಂದ ಚೇತರಿಸಿಕೊಂಡು ಸಹಜಸ್ಥಿತಿಗೆ ಮರಳುತ್ತಿದೆ. ಇದರ ನಡುವೆ ಮತ್ತೊಂದು ಅಲೆ ಮಾತುಗಳು ಕೇಳಿಬರುತ್ತಿರುವುದು ಆತಂಕ ಮತ್ತಷ್ಟು ಹೆಚ್ಚಾಗಿದೆ. 

2019ರಲ್ಲಿ ಮೊದಲ ಬಾರಿಗೆ ಚೀನಾದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. 2021ರ ಆರಂಭದಲ್ಲೇ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳಿಗೆ ಕೊರೋನಾ ಹಬ್ಬಿತ್ತು. ಬಳಿಕ ವಿಶ್ವವೇ ಲಾಕ್ ಡೌನ್ ಮೊರೆ ಹೋಗಿತ್ತು ಎಂಬುದು ಇದೀಗ ಇತಿಹಾಸ. 2020 ಜನವರಿ 27 ರಂದು ಕೇರಳ ಮೊದಲ ಕೊರೊನಾ ಪ್ರಕರಣ ವರದಿಯಾಗಿತ್ತು. ಆದರೆ, ಸೋಂಕಿತರ ಸಾವಾಗಿರಲಿಲ್ಲ. ಸೌದಿ ಅರೇಬಿಯಾ ಪ್ರಯಾಣ ಹಿನ್ನೆಲೆ ಹೊಂದಿದ್ದ ಕಲಬುರಗಿಯ 76 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 10ರಂದು ಕಲಬುರಗಿಯಲ್ಲಿ ಮೃತಪಟ್ಟಿದ್ದು, ಮಾರ್ಚ್ 12 ರಂದು ಆತನಲ್ಲಿ ಸೋಂಕಿರುವುದು ದೃಢಪಟ್ಟಿತ್ತು. ಇದು ದೇಶದ ಮೊದಲ ಕೊರೊನಾ ಸಾವಾಗಿದ್ದ ಕಾರಣ ರಾಜ್ಯದಲ್ಲಿ ಆತಂಕ ಹೆಚ್ಚಾಗಿ ಬಳಿಕ ಎರಡನೇ ದಿನಕ್ಕೆ ರಾಜ್ಯ ಸರಕಾರ ಲಾಕ್‍ಡೌನ್ ಘೋಷಿಸಿತ್ತು.

ಮೊದಲ ವರ್ಷ 12,373 ಮಂದಿ, ಎರಡನೇ ವರ್ಷ 27,633 ಸೇರಿ ಈವರೆಗೂ 40,006 ಸಾವು ದಾಖಲಾಗಿವೆ. ಡೆಲ್ಟಾ ರೂಪಾಂತರಿಯಿಂದ ಉಂಟಾದ ಎರಡನೇ ಅಲೆಯಲ್ಲಿ ಸಾವು ಸಾಕಷ್ಟು ಏರಿಕೆಯಾಗಿದ್ದು, ಈ ಅಲೆಯಲ್ಲಿ 26 ಸಾವಿರ ಮಂದಿ ಮೃತಪಟ್ಟರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿತ್ಯ ಸರಾಸರಿ 300ಕ್ಕೂ ಹೆಚ್ಚು ಮಂದಿ, ಒಂದೇ ದಿನ ಬರೋಬ್ಬರಿ 626 ಸಾವು ದಾಖಲಾಗಿತ್ತು. ಸದ್ಯ ಒಮಿಕ್ರೋನ್ ರೂಪಾಂತರಿಯ ಮೂರನೇ ಅಲೆಯಿಂದ ಸಾಕಷ್ಟುಸಾವು ತಗ್ಗಿದ್ದು, ಮೂರೂವರೆ ತಿಂಗಳಲ್ಲಿ 1,700 ಮಂದಿ ಮೃತಪಟ್ಟಿದ್ದಾರೆ. ಸದ್ಯ ಸಾವು ಬೆರಳೆಣಿಕೆಗೆ ಇಳಿಕೆಯಾಗಿದೆ. ದೇಶದಲ್ಲಿ ಮಹಾರಾಷ್ಟ್ರ, ಕೇರಳ ಬಿಟ್ಟರೆ ಮೂರನೇ ಅತಿ ಹೆಚ್ಚು ಸಾವು ಕರ್ನಾಟಕ ರಾಜ್ಯದಲ್ಲಿ ಉಂಟಾಗಿದೆ ಎಂದು ಅಂಕಿ ಅಂಶ ಸ್ಪಷ್ಟಪಡಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಚೀನಾದಲ್ಲಿ ಮತ್ತೆ ಕೊರೋನಾರ್ಭಟ : ಕಠಿಣ ಲಾಕ್ ಡೌನ್ ಘೋಷಿಸಿದ ಚೀನಾ ಸರಕಾರ, ಭಾರತ ಸಹಿತ ಇತರ ದೇಶಗಳಿಗೂ ವ್ಯಾಪಿಸಿದ ಆತಂಕ! Rating: 5 Reviewed By: karavali Times
Scroll to Top