ಬಂಟ್ವಾಳ, ಮಾರ್ಚ್ 25, 2022 (ಕರಾವಳಿ ಟೈಮ್ಸ್) : ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಬಂಟ್ವಾಳ ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಮಳೆಹಾನಿ ಪ್ರಕರಣಗಳೂ ವರದಿಯಾಗಿದೆ.
ಮಾಣಿ ಗ್ರಾಮದ ದಕ್ಷಿಣ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಕುಸಿದು ಬಿದ್ದು ಹಾನಿ ಸಂಭವಿಸಿದೆ, ಮಾಣಿ ಗ್ರಾಮದ ಕೋಚಪಲ್ಕೆ ನಿವಾಸಿ ಕೆ ನೆಬಿಸ ಕೋಂ ಶೇಖ್ ಅಬ್ದುಲ್ ಖಾದರ್ ಅವರ ಮನೆಗೆ ಭಾಗಶಃ ಹಾನಿಯಾಗಿದೆ, ಪೆರಾಜೆ ಗ್ರಾಮದ ಅಡ್ಕರೇಕೋಡಿ ನಿವಾಸಿ ಸಂತಾಪ್ಪ ಬಿನ್ ಡೊಂಬಯ್ಯ ಪೂಜಾರಿ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಗೊಳಗಾಗಿದೆ, ಬಾಳ್ತಿಲ ಗ್ರಾಮದ ಬೆರ್ಕಳ ನಿವಾಸಿ ಸಂತಾನ್ ವೇಗಸ್ ಬಿನ್ ಪೌಲ್ ವೇಗಸ್ ಅವರ ಅಡಿಕೆ ತೋಟಕ್ಕೆ ಮಳೆ-ಗಾಳಿಯಿಂದ ಹಾನಿಯಾಗಿದೆ, ಅದೇ ಪರಿಸರದ ಬಿ ರಾಜೇಂದ್ರ ಬಿನ್ ಮೋಹನ್ ರಾವ್ ಅವರ ಅಡಿಕೆ ತೋಟ ಹಾಗೂ ಸಾವಿತ್ರಿ ಕೋಂ ಲೋಹಿತಾಶ್ವ ಅವರ ಅಡಿಕೆ ತೋಟ ಹಾಗೂ ರಬ್ಬರ್ ತೋಟ ಮಳೆ-ಗಾಳಿಯಿಂದ ಹಾನಿಯಾಗಿದೆ. ಪೆರಾಜೆ ಗ್ರಾಮದ ಜೋಗಿಬೆಟ್ಟು ನಿವಾಸಿ ಫಾತಿಮತ್ ಬುಶ್ರ ಕೋಂ ಉಮ್ಮರ್ ಅವರ ಮನೆಯ ಶೀಟ್ ಮೇಲೆ ಅಡಿಕೆ ಮತ್ತು ಹಲಸಿನ ಮರ ಬಿದ್ದು ಹಾನಿ ಸಂಭವಿಸಿದೆ, ಪೆರಾಜೆ ಗ್ರಾಮದ ಬುಡೋಳಿ ನಿವಾಸಿ ಉಮ್ಮರ್ ಅವರ ವಾಸ್ತವ್ಯ ಇಲ್ಲದ ಹಳೆಯ ಮನೆ ಗಾಳಿ ಮಳೆಗೆ ಹಾನಿಯಾಗಿದೆ ಎಂದು ತಾಲೂಕು ಕಚೇರಿ ಮಳೆಹಾನಿ ವಿಷಯ ನಿರ್ವಾಹಕ ವಿಶು ಕುಮಾರ್ ಮಾಹಿತಿ ನೀಡಿದ್ದಾರೆ.
0 comments:
Post a Comment