ಸ್ಪೀಡ್ ಪೋಸ್ಟ್ ಮೂಲಕ ಜನನ/ ಮರಣ ಪ್ರಮಾಣ ಪತ್ರ ಮನೆ ಬಾಗಿಲಿಗೆ : ಮನಪಾ-ಅಂಚೆ ಇಲಾಖೆಯ ವಿಶಿಷ್ಟ ಸೇವೆಗೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಚಾಲನೆ - Karavali Times ಸ್ಪೀಡ್ ಪೋಸ್ಟ್ ಮೂಲಕ ಜನನ/ ಮರಣ ಪ್ರಮಾಣ ಪತ್ರ ಮನೆ ಬಾಗಿಲಿಗೆ : ಮನಪಾ-ಅಂಚೆ ಇಲಾಖೆಯ ವಿಶಿಷ್ಟ ಸೇವೆಗೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಚಾಲನೆ - Karavali Times

728x90

22 March 2022

ಸ್ಪೀಡ್ ಪೋಸ್ಟ್ ಮೂಲಕ ಜನನ/ ಮರಣ ಪ್ರಮಾಣ ಪತ್ರ ಮನೆ ಬಾಗಿಲಿಗೆ : ಮನಪಾ-ಅಂಚೆ ಇಲಾಖೆಯ ವಿಶಿಷ್ಟ ಸೇವೆಗೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಚಾಲನೆ

ಮಂಗಳೂರು, ಮಾರ್ಚ್ 22, 2022 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆ ಹಾಗೂ ಅಂಚೆ ಇಲಾಖೆಯ ಮಂಗಳೂರು ವಿಭಾಗದ ಜಂಟಿ ಸಹಯೋಗದಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಜನನ/ ಮರಣ ಪ್ರಮಾಣ ಪತ್ರಗಳನ್ನು ಮನೆಬಾಗಿಲಿಗೆ ತಲುಪಿಸುವ ವಿಶಿಷ್ಟ ಸೇವೆಗೆ ಮಂಗಳವಾರ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಚಾಲನೆ ನೀಡಿದರು. 

ಅಂಚೆ ಇಲಾಖೆ ಹಾಗೂ ಮನಪಾ ಜೊತೆಗೂಡಿ ಚಾಲ್ತಿಗೆ ತಂದಿರುವ ಈ ಯೋಜನೆ ಕರ್ನಾಟಕ ರಾಜ್ಯದಲ್ಲಿ  ಮೊದಲ ಬಾರಿಗೆ ಚಾಲನೆಗೆ ಬಂದಿದೆ. ಈ ವ್ಯವಸ್ಥೆಯಡಿ ಜನನ/ ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಜಿದಾರರು ಎರಡು ಬಾರಿ ಮಂಗಳೂರು ಮಹಾನಗರ ಪಾಲಿಕೆ ಕಛೇರಿಗೆ ಭೇಟಿ ನೀಡಬೇಕು. ಈ ಕಾರ್ಯವಿಧಾನದಲ್ಲಿ ಸಾಮಾನ್ಯ ಜನರಿಗೆ ಅನಾನುಕೂಲಗಳು ಹಲವು. ಉದಾ : ಕಾಸರಗೋಡು, ಕಾರವಾರ, ಶಿರಸಿ, ಹಾವೇರಿ ಮುಂತಾದ ದೂರದ ಸ್ಥಳಗಳಿಂದ ಸಾರ್ವಜನಿಕರು ಹೆರಿಗೆ ಕೇಂದ್ರಗಳು ಹಾಗೂ ಗಂಭೀರ ಖಾಯಿಲೆಯ ಚಿಕ್ಸಿತೆಗಾಗಿ ಮಂಗಳೂರಿನ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆ. ಅದರಂತೆ ಪ್ರಸ್ತುತ ಕುಟುಂಬ ಸದಸ್ಯರು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳಲ್ಲಿ ಸಂಭವಿಸುವ ಜನನ/ ಮರಣಗಳ ಪ್ರಮಾಣ ಪತ್ರಗಳನ್ನು ಪಡೆಯಲು ಸ್ವತ: ಮಂಗಳೂರು ಮಹಾನಗರ ಪಾಲಿಕೆಯನ್ನು ಸಂಪರ್ಕಿಸಬೇಕು. ಕೆಲವೊಮ್ಮೆ ತಾಂತ್ರಿಕ ದೋಷ ಹಾಗೂ ಇನ್ನಿತರ ಕಾರಣಗಳಿಂದ ಅರ್ಜಿದಾರರು ಎರಡಕ್ಕಿಂತ ಹೆಚ್ಚಿನ ಬಾರಿ ಮಂಗಳೂರು ಮಹಾನಗರ ಪಾಲಿಕೆಗೆ ಭೇಟಿ ನೀಡಬೇಕಾಗುತ್ತದೆ. ಆದ್ದರಿಂದ ಈ ವ್ಯವಸ್ಥೆಯಲ್ಲಿ ದೂರದ ಸ್ಥಳಗಳಿಂದ ಬರುವ ಸಾರ್ವಜನಿಕರು ಪ್ರಮಾಣ ಪತ್ರಗಳನ್ನು ಪಡೆಯಲು ಸಮಯ ಹಾಗೂ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ. 

ಈ ಎಲ್ಲಾ ಅನಾನುಕೂಲತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯು ಒಡಂಬಂಡಿಕೆಯನ್ನು ಮಾಡಿಕೊಂಡಿದ್ದು ಈ ಸೇವೆಯಡಿಯಲ್ಲಿ ಜನನ/ ಮರಣ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರಿಗೆ  2 ಆಯ್ಕೆಗಳನ್ನು ನೀಡಲಾಗುತ್ತದೆ. ಅರ್ಜಿದಾರರು ಖುದ್ದಾಗಿ ಮಹಾನಗರ ಪಾಲಿಕೆಗೆ ಮತ್ತೊಮ್ಮೆ ಭೇಟಿ ನೀಡಿ ಈ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು ಅಥವಾ ಸ್ಪೀಡ್  ಪೋಸ್ಟ್ ಸೇವೆಯ ಮೂಲಕ ಪ್ರಮಾಣ ಪತ್ರವನ್ನು ತಮ್ಮ ಮನೆಬಾಗಿಲಲ್ಲಿ ಪಡೆದುಕೊಳ್ಳಬಹುದು. 

ಗ್ರಾಹಕರ ಆಯ್ಕೆಯು ಮನೆಬಾಗಿಲಿನಲ್ಲಿ ಪಡೆದುಕೊಳ್ಳುವುದಾಗಿದ್ದಲ್ಲಿ ಹೆಚ್ಚುವರಿ ಅರ್ಜಿಯೊಂದನ್ನು ಭರ್ತಿ ಮಾಡಿ ಮನಪಾ ಕಚೇರಿ ಕೌಂಟರಿನಲ್ಲಿ ಸಲ್ಲಿಸತಕ್ಕದ್ದು. ಈ ಅರ್ಜಿಯು ಸರಳವಾಗಿದ್ದು, ಕೇವಲ ಬಟವಾಡೆಯಾಗಬೇಕಾಗಿರುವ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಬೇಕು ಹಾಗೂ 100 ರೂಪಾಯಿಯನ್ನು ಬಟವಾಡೆ ಮಾಡುವ ಸಂದರ್ಭದಲ್ಲಿ ಪೋಸ್ಟ್ ಮ್ಯಾನ್ ಕೈಯಲ್ಲಿ ನೀಡಲು ತಮ್ಮ ಸಮ್ಮತಿ ಇದೆ ಎಂದು ಸಹಿ ಮಾಡಬೇಕು. ಪ್ರಮಾಣ ಪತ್ರವು ಮುದ್ರಣಗೊಂಡ ಬಳಿಕ ಅಂಚೆ ಇಲಾಖೆಯು ಈ ಪ್ರಮಾಣ ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆಗೆ ಬಟವಾಡೆ ಮಾಡುವುದು.

ಈ ಸೇವೆಯು ಸಂಪೂರ್ಣವಾಗಿ ಐಚ್ಭಿಕವಾಗಿದೆ, ಈ ಪ್ರಮಾಣ ಪತ್ರವನ್ನು ಭಾರತದ ಯಾವುದೇ ಊರಿಗೂ ಸ್ಫೀಡ್ ಪೋಸ್ಟ್ ಸೇವೆಯ ಮೂಲಕ ತಲುಪಿಸಬಹುದು, ಪ್ರಮಾಣ ಪತ್ರದ ಪ್ರತಿಗಳು ಎಷ್ಟೇ ಇದ್ದರೂ ಮತ್ತು ಯಾವುದೇ ಊರಿಗೂ ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಿಸಲು ನಿಗದಿಪಡಿಸಿದ ಶುಲ್ಕ 100 ರೂಪಾಯಿ ಮಾತ್ರ, ಬಟವಾಡೆಯಾಗಬೇಕಾಗಿರುವ ವಿಳಾಸವು ಪ್ರಮಾಣ ಪತ್ರದ ಅರ್ಜಿಯಲ್ಲಿ ನಮೂದಿಸಲಾದ ವಿಳಾಸಕ್ಕಿಂತ ಬೇರೆ ಕೂಡಾ ಆಗಿರಬಹುದು. ಅರ್ಜಿದಾರರು ಪ್ರಮಾಣ ಪತ್ರವನ್ನು ಮನೆಯ ವಿಳಾಸದಲ್ಲಿ ಅಥವಾ ಕಛೇರಿಯ ವಿಳಾಸದಲ್ಲೂ ಪಡೆಯಬಹುದು, ಅರ್ಜಿದಾರರ ಅನುಪಸ್ಥಿತಿಯಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರು ಬಟವಾಡೆ ಪಡೆದುಕೊಳ್ಳಬಹುದು, ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ 3 ರಿಂದ 30 ದಿನಗಳ ಒಳಗಾಗಿ ಪ್ರಮಾಣ ಪತ್ರವು ಮುದ್ರಣ ಗೊಂಡು ನಂತರ ಅದನ್ನು 2 ರಿಂದ 5 ದಿನಗಳ ಒಳಗಾಗಿ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸಲಾಗುವುದು, ರವಾನೆಯಿಂದ ಬಟವಾಡೆವರೆಗೆ ವಿವಿಧ ಹಂತಗಳಲ್ಲಿ ಅರ್ಜಿದಾರರಿಗೆ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡಲಾಗುವುದು, ಈ ಸೇವೆಯನ್ನು ಪಡೆಯಲು, ಸಲ್ಲಿಸಬೇಕಾದ ಅರ್ಜಿಯು ಮಂಗಳೂರು ಮಹಾನಗರ ಪಾಲಿಕೆಯ ಕೌಂಟರಿನಲ್ಲಿ ಲಭ್ಯವಿದ್ದು, ಉಚಿತವಾಗಿರುತ್ತದೆ, ಈ ಸೇವೆಯನ್ನು ಪಡೆಯಲು ಮಂಗಳೂರು ಮಹಾನಗರ ಪಾಲಿಕೆಯ ಕೌಂಟರಿನಲ್ಲಿ ಯಾವುದೇ ಶುಲ್ಕ ಭರಿಸಬೇಕಾಗಿಲ್ಲ, ಸ್ಪೀಡ್ ಪೋಸ್ಟ್ ವಿತರಣೆಯ ಸಂಧರ್ಭದಲ್ಲಿ, ಪೋಸ್ಟ್ ಮ್ಯಾನ್ ಮೂಲಕ 100 ರೂಪಾಯಿ ನಿಗದಿತ ಶುಲ್ಕವನ್ನು ಅಂಚೆ ಕಚೇರಿಗೆ ಪಾವತಿಸಬೇಕು. ಪ್ರಮಾಣ ಪತ್ರವನ್ನು ಒಳಗೊಂಡ ಸ್ಪೀಡ್ ಪೋಸ್ಟ್ ಬಟವಾಡೆಯ ಯಾವ ಹಂತದಲ್ಲಿದೆ ಎಂದು www.indiapost.gov.in ನಲ್ಲಿ ಟ್ರ್ಯಾಕ್ ಮಾಡಿ ಮಾಹಿತಿ ಪಡೆಯಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸ್ಪೀಡ್ ಪೋಸ್ಟ್ ಮೂಲಕ ಜನನ/ ಮರಣ ಪ್ರಮಾಣ ಪತ್ರ ಮನೆ ಬಾಗಿಲಿಗೆ : ಮನಪಾ-ಅಂಚೆ ಇಲಾಖೆಯ ವಿಶಿಷ್ಟ ಸೇವೆಗೆ ಮೊದಲ ಬಾರಿಗೆ ಮಂಗಳೂರಿನಲ್ಲಿ ಚಾಲನೆ Rating: 5 Reviewed By: karavali Times
Scroll to Top