ಬೆಂಗಳೂರು, ಮಾರ್ಚ್ 02, 2022 (ಕರಾವಳಿ ಟೈಮ್ಸ್) : ದ್ವಿತೀಯ ಪಿಯುಸಿ ಹಾಗೂ ಜೆಇಇ ಪರೀಕ್ಷೆಯು ಒಟ್ಟಿಗೆ ಬಂದ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಎಪ್ರಿಲ್ 22 ರಿಂದ ಮೇ 11ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಹೊಸ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಗೊಳಿಸಿರುವ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ಪರಿಷ್ಕೃತ ತಾತ್ಕಾಲಿಕ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾರ್ಚ್ 5ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ. ಆಕ್ಷೇಪಣೆಯನ್ನು ಪಿಯು ಇಲಾಖೆಯ ಇಮೇಲ್ ಮೂಲಕ ಮಾತ್ರ ಸಲ್ಲಿಸಲು ಅವಕಾಶ ಇದ್ದು, ಅಂಚೆ ಮೂಲಕ ಅಥವಾ ನಿಗದಿತ ದಿನಾಂಕದ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದೂ ಕೂಡಾ ಪಿಯು ಬೋರ್ಡ್ ಪ್ರಕಟಣೆ ತಿಳಿಸಿದೆ.
ಈ ಮೊದಲು ಎಪ್ರಿಲ್ 16 ರಿಂದ ಮೇ 6ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿ ಮಾಡಲಾಗಿತ್ತು. ಆದರೆ ಜೆಇಇ ಪರೀಕ್ಷೆಯು ಒಟ್ಟಿಗೆ ಬಂದ ಕಾರಣ ಈ ಬದಲಾವಣೆ ಮಾಡಲಾಗಿದೆ ಎಂದು ಮಂಡಳಿ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು, ರಾಜ್ಯದ ದ್ವಿತೀಯ ಪಿಯು ಪರೀಕ್ಷೆ ಮತ್ತು ಎನ್‍ಟಿಎ ನಡೆಸುವ ಜೆಇಇ ಪರೀಕ್ಷೆಯ ಕೆಲ ಪತ್ರಿಕೆಗಳು ಒಂದೇ ದಿನಾಂಕದಂದು ಬಂದಿರುವ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಈ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮಾ 5ರ ಸಂಜೆ 5 ಗಂಟೆವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೊಸ ವೇಳಾಪಟ್ಟಿಯನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.
ಪರಿಷ್ಕೃತ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ
ಎಪ್ರಿಲ್ 22 ರಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಎ 23 ರಂದು ಹಿಂದಿ, ಎ 25 ರಂದು ಅರ್ಥಶಾಸ್ತ್ರ, ಎ 26 ರಂದು ಹಿಂದೂಸ್ಥಾನಿ ಸಂಗೀತ, ಮನಃಶಾಸ್ತ್ರ, ರಾಸಾಯನ ಶಾಸ್ತ್ರ, ಎ 27 ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಎ 28 ರಂದು ಕನ್ನಡ, ಅರೇಬಿಕ್, ಎ 30 ರಂದು ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ, ಮೇ 2 ರಂದು ಭೂಗೋಳಶಾಸ್ತ್ರ, ಜೀವಶಾಸ್ತ್ರ, ಮೇ 4 ರಂದು ಇಂಗ್ಲಿಷ್, ಮೇ 5 ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್, ಮೇ 6 ರಂದು ಗಣಿತಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲಗಣಿತ, ಮೇ 7 ರಂದು ಐಚ್ಚಿಕ ಕನ್ನಡ, ಲೆಕ್ಕ ಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ, ಮೇ 9 ರಂದು ಇತಿಹಾಸ, ಭೌತಶಾಸ್ತ್ರ ಹಾಗೂ ಮೇ 11 ರಂದು ರಾಜ್ಯಶಾಸ್ತ್ರ ಸಂಖ್ಯಾಶಾಸ್ತ್ರ ಪರೀಕ್ಷೆಗಳು ನಡೆಯಲಿದೆ.
ಕೊರೋನಾ ಹಾಗೂ ಲಾಕ್ ಡೌನ್ ಕಾರಣದಿಂದ ಭೌತಿಕ ತರಗತಿಗಳಿಗೆ ವಿದ್ಯಾರ್ಥಿಗಳಿಗೆ ಹಾಜರಾಗಲು ಅನಾನುಕೂಲ ಆಗಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಅಂತಿಮ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ, ಕಡ್ಡಾಯ ಹಾಜರಾತಿ ನಿಯಮದಿಂದ ವಿನಾಯಿತಿ ಪ್ರಕಟಿಸಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು 75% ಹಾಜರಾತಿಯನ್ನು ಕಡ್ಡಾಯಗೊಳಿಸದಿರಲು ಇಲಾಖೆ ತೀರ್ಮಾನಿಸಿದೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment