ಬಂಟ್ವಾಳ, ಫೆಬ್ರವರಿ 27, 2022 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಕಳೆದ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣ ಇದೀಗ ಮತ್ತೆ ಪ್ರತಿಧ್ವನಿಸುತ್ತಿದೆ. ಇತ್ತೀಚೆಗೆ ಶರತ್ ಮಡಿವಾಳ ಅವರ ಅವರ ತಂದೆ ಸುದ್ದಿಗಾರರ ಮುಂದೆ ತನ್ನ ಮಗನ ಕೊಲೆಗೆ ಮಾಜಿ ಸಚಿವ ಬಿ ರಮಾನಾಥ ರೈ ಹಾಗೂ ಜಿ ಪಂ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಅವರು ನೇರ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಕ್ಕೆ ಪ್ರತಿಯಾಗಿ ಭಾನುವಾರ ತಾಲೂಕಿನ ಪ್ರಸಿದ್ದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿ ಸುಳ್ಳು ಆರೋಪ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವಂತೆ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ಕಂದೂರು ನಿವಾಸಿ ಶರತ್ ಮಡಿವಾಳ ಅವರನ್ನು ದುಷ್ಕರ್ಮಿಗಳು ಬಿ ಸಿ ರೋಡಿನ ಅವರ ಉದಯ ಲಾಂಡ್ರಿಗೆ ನುಗ್ಗಿ ಕಡಿದು ಕೊಲೆ ಮಾಡಿದ್ದರು. ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ನೈಜ ಹಂತಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಈ ಸಂದರ್ಭ ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ ಅವರು ಶರತ್ ಹತ್ಯೆಯ ಹಿಂದೆ ರಮಾನಾಥ ರೈ ಇದ್ದಾರೆ ಎಂಬ ಆರೋಪ ಮಾಡಿದ್ದಾರೆ. ಇದರಿಂದ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿರುವ ಅವರು ಇದೊಂದು ರಾಜಕೀಯ ಪ್ರೇರಿತ ಸುಳ್ಳು ಆರೋಪ ಮತ್ತು ಪ್ರಕರಣ ವಿಚಾರಣೆ ನಡೆಯುತ್ತಿರುವುದರಿಂದ ಪ್ರಕರಣದ ದಿಕ್ಕು ತಪ್ಪಿಸುವಂತಾಗಿದೆ ಎಂದು ಹೇಳಿದ್ದಾರೆ.
ಆರೋಪದ ಸತ್ಯಾಸತ್ಯತೆ ಜನತೆಗೆ ತಿಳಿಸುವಂತೆ ರಮಾನಾಥ ರೈಯವರು ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ಮಾಡಿ ಕ್ಷೇತ್ರದ ಅಮ್ಮನವರಲ್ಲಿ ಹರಿಕೆ ಮಾಡಿ ಶರತ್ ಮಡಿವಾಳರ ಹತ್ಯೆಯಲ್ಲಿ ನನ್ನ ಕೈವಾಡ ಇದ್ದರೆ ನನಗೆ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಯಾರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಾರೆ ಅವರಿಗೆ ಕ್ಷೇತ್ರದ ತಾಯಿ ಕಠಿಣ ಶಿಕ್ಷೆ £ೀಡುವಂತೆ ಪ್ರಾರ್ಥಿಸಿದ್ದಾರೆ.
ರಮಾನಾಥ ರೈ ಅವರ ಈ ಹರಕೆ ಬೇಡಿಕೆಗೆ ಪ್ರತಿಯಾಗಿ ನೇರ ಆರೋಪ ಮಾಡಿರುವ ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ ಅವರು ಯಾವ ರೀತಿಯ ಪ್ರತಿಕ್ರಿಯೆ ಮಾಡುತ್ತಾರೆ ಕಾದುನೋಡಬೇಕಾಗಿದೆ. ಒಟ್ಟಿನಲ್ಲಿ ಕರಾವಳಿಯಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷದ ಮಾನವ ಕೊಲೆಗಳು ರಾಜಕೀಯ ಮೇಲಾಟಕ್ಕೆ ಕಾರಣವಾಗುತ್ತಿರುವುದು ಮಾತ್ರ ಜನತೆಯಲ್ಲಿ ಒಂದು ರೀತಿಯ ಅತ್ಯಾತಂಕ ಉಂಟು ಮಾಡಿದೆ.
Good discussion
ReplyDelete