ಮೈಸೂರು, ಫೆಬ್ರವರಿ 10, 2022 (ಕರಾವಳಿ ಟೈಮ್ಸ್) : ಪುರಾತನ ಸಂಸ್ಕøತಿ ನಾಶ ಮಾಡುವ ಸಂಘಿಗಳ ವಿರುದ್ದ ಒಗ್ಗಟ್ಟಾಗಿ ಖಂಡಿಸಬೇಕು. ಧರ್ಮದ ಅರ್ಥವನ್ನು ಅವರಿಗೆ ಅರ್ಥ ಮಾಡಿಕೊಡುವ ಕೆಲಸ ಆಗಬೇಕು ಎಂದು ಮೈಸೂರು ಬಸವ ಜ್ಞಾನ ಮಂದಿರದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಕರೆ ನೀಡಿದರು.
ಅತಾಯೆ ರಸೂಲ್ ಮೂಮೆಂಟ್ ಮೈಸೂರು ಇದರ ಆಶ್ರಯದಲ್ಲಿ ಇಲ್ಲಿನ ಗೌಸಿಯಾ ನಗರದ ಎ ಬ್ಲಾಕ್, ಟಿ ಸಿ ಗಲ್ಲಿಯ ಆಸ್ತಾನೆ ಖ್ವಾಜಾ ಇಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುವ ಹಝ್ರತ್ ಖ್ವಾಜಾ ಮುಯೀನುದ್ದೀನ್ ಚಿಸ್ತಿಯ್ಯಿಲ್ ಅಜ್ಮೀರಿ (ರ) ಅವರ ಅನುಸ್ಮರಣೆ “ಖ್ವಾಜಾ ಕೀ ಛಟ್ಟಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಿಂಗ ಬಣ್ಣಕ್ಕೂ ಹಿಜಾಬ್ ಗೂ ಇರುವ ಸಂಬಂಧ ಆದರೂ ಏನು? ಹಿಜಾಬಿಗೆ ಧಾರ್ಮಿಕವಾಗಿಯೂ ವೈಜ್ಞಾನಿಕವಾಗಿಯೂ ವಿಶೇಷ ಮಹತ್ವ ಇದೆ. ಹಿಜಾಬ್ ಹೆಣ್ಣು ಮಕ್ಕಳ ಪಾವಿತ್ರ್ಯತೆ ರಕ್ಷಿಸುವುದರ ಜೊತೆಗೆ ಪ್ರಾಕೃತಿಕ ಮಳೆ ಬಿಸಿಲು ಚಳಿಯಿಂದಲೂ ರಕ್ಷಿಸುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ದುಷ್ಕರ್ಮಿಗಳು ಇದರ ವಿರುದ್ದ ಇಂದು ಬೀದಿಗೆ ಬಂದಿದ್ದಾರೆ. ಇದು ಖಂಡನೀಯ. ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ದುಷ್ಟರು ಇಂದು ಹಿಜಾಬ್ ವಿರೋಧಿಸುತ್ತಾರೆ. ಲಜ್ಜೆ-ಮಾನ್ಯತೆ ಕಲಿಯಲು ಬರುವ ಹೆಣ್ಣು ಮಕ್ಕಳಿಗೆ ಮಾಡುವ ಅವಮಾನ ಇದಾಗಿದೆ ಎಂದರು.
ಹಿಂದೂ ಧರ್ಮ ಮಾತೆಯರಿಗೆ ವಿಶೇಷ ಮಹತ್ವ-ಸ್ಥಾನಮಾನ ಕಲ್ಪಿಸುತ್ತದೆ. ಅದೇ ಹಿಂದೂ ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೇರಿದ ಬಿಜೆಪಿಗರು ಭೇಟಿ ಬಚಾವೋ-ಭೇಟಿ ಪಡಾವೋ ಸ್ಲೋಗನ್ ಮೂಲಕ ಮೆರಯುತ್ತಿದ್ದಾರೆ. ಆದರೆ ಮಾನ ಮುಚ್ಚಿ ವಿದ್ಯಾಸಂಸ್ಥೆಗೆ ಶಿಕ್ಷಣ ಕಲಿಯಲು ಬರುವ ಹೆಣ್ಣು ಮಕ್ಕಳನ್ನು ಗೌರವಿಸಬೇಕಾದ ಜಾಗದಲ್ಲಿ ಅವರನ್ನು ವಸ್ತ್ರಧಾರಣೆಯ ಹೆಸರಿನಲ್ಲಿ ಅವಮಾನಿಸುತ್ತಿರುವುದು ಅವರ ಧರ್ಮನಿಷ್ಠೆಯನ್ನೇ ಪ್ರಶ್ನಿಸುವಂತಾಗಿದೆ ಎಂದು ಸ್ವಾಮೀಜಿ ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖ್ವಾಜಾ ಅಝೀಂ ಅಲಿ ಶಾ ಚಿಶ್ತೀ ಮೈಸೂರು ಅವರು ಮಾತನಾಡಿ, ಕೇಸರಿ ಬಣ್ಣಕ್ಕೆ ಹಿಂದೂ ಹಾಗೂ ಮುಸ್ಲಿಂ ಧರ್ಮದಲ್ಲಿ ವಿಶಿಷ್ಟ ಮಹತ್ವ ಇದ್ದು, ಅದನ್ನು ಯಾರದೋ ದ್ವೇಷಕ್ಕಾಗಿ ಎಲ್ಲೆಂದರಲ್ಲಿ ಧರಿಸುವುದು ಸಮಂಜಸವಲ್ಲ. ಧಾರ್ಮಿಕ ಸಂಕೇತಗಳ ಗೌರವ-ಪಾವಿತ್ರ್ಯತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಧಾರ್ಮಿಕ ಪರಿಜ್ಞಾನದ ಕೊರೆತೆಯಿಂದಾಗಿ ಸಮೂಹದ ಯುವಕರಲ್ಲಿ ಅಚಾತುರ್ಯಗಳು ಕಂಡು ಬರುತ್ತಿದೆ. ಇದಕ್ಕೆ ಧಾರ್ಮಿಕ ಮುಖಂಡರು ಅವಕಾಶ ನೀಡಬಾರದು. ಯುವ ಸಮೂಹದಲ್ಲಿ ಸ್ವಧರ್ಮಗಳ ಬಗ್ಗೆ ಅರಿವು-ಪರಿಜ್ಞಾನ ಮೂಡಿಸುವುದರ ಜೊತೆಗೆ ಸಹೋದರ ಧರ್ಮಗಳ ಬಗ್ಗೆ ಗೌರವ-ಸಹಿಷ್ಟುತೆ ಮೂಡಿಸುವ ಕೆಲಸವನ್ನು ಧರ್ಮಗಳ ಧಾರ್ಮಿಕ ಪಂಡಿತರು ಮಾಡಬೇಕಿದೆ ಎಂದರು.
ಹಿಜಾಬ್ ಧಾರಣೆಗೆ ಪ್ರತಿಯಾಗಿ ಕೇಸರಿ ಧಾರಣೆ ದ್ವೇಷದ ಪ್ರತೀಕವಾಗಿ ಕ್ಯಾಂಪಸ್ ಆವರಣದಲ್ಲಿ ಧರಿಸಿ ಅವಮಾನ ಮಾಡುತ್ತಿರುವ ಹಿಂದೂ ಯುವಕರಿಗೆ ಹಿಂದೂ ಧರ್ಮದ ಪಾವಿತ್ರ್ಯತೆ ಬಗ್ಗೆ ಸಮುದಾಯದ ಸ್ವಾಮೀಜಿಗಳು ಧಾರ್ಮಿಕ ಪಂಡಿತರುಗಳು ಮನವರಿಕೆ ಮಾಡಬೇಕಾದ ತುರ್ತು ಅಗತ್ಯವಿದೆ. ಧರ್ಮ, ಮಾನವೀಯ ಮೌಲ್ಯಗಳನ್ನು ಕಲಿತು ಸೌಹಾರ್ದ ಸಮಾಜ ಕಟ್ಟುವ ಉದ್ದೇಶವಿರುವ ವಿದ್ಯಾ ಕ್ಯಾಂಪಸ್ಸುಗಳಲ್ಲೇ ಕೋಮು ವಿಷ ಬೀಜ ಬಿತ್ತುವ ಕಾರ್ಯ ಅತ್ಯಂತ ಆತಂಕ ಹಾಗೂ ಖಂಡನೀಯಾಗಿದ್ದು, ಇದನ್ನು ಇಡೀ ಸಮಾಜದ ಬೇಧ-ಭಾವ ಮರೆತು ಒಗ್ಗಟ್ಟಿನಿಂದ ವಿರೋಧಿಸುವ ಅನಿವಾರ್ಯತೆ ಇಂದು ಹೆಚ್ಚಿದೆ ಎಂ ಅಝೀಂ ಅಲಿ ಶಾ ಚಿಶ್ತಿ, ಅಜ್ಮೀರ್ ಶರೀಫಿನಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಖ್ವಾಜಾ ಗರೀಬ್ ನವಾಝ್ ಅವರು ಪವಿತ್ರ ಇಸ್ಲಾಂ ಧರ್ಮದ ಮೌಲ್ಯಗಳನ್ನು ಪಾಲಿಸುತ್ತಾ ಇಲ್ಲಿನ ಸಹೋದರ ಧರ್ಮೀಯರ ಮನಗೆದ್ದವರು. ಇಂದಿಗೂ ಅವರ ಸನ್ನಿಧಾನದಲ್ಲಿ ಜಾತಿ-ಮತ ಬೇಧವಿಲ್ಲದೆ ಜನ ಮಾನಸಿಕ ನೆಮ್ಮದಿಗಾಗಿ ಹಗಲು-ರಾತ್ರಿ ಬಂದು ಅಹವಾಲು ಸಲ್ಲಿಸಿ ಕೃತಾರ್ಥರಾಗುತ್ತಿದ್ದಾರೆ. ದೇಶದ ಶಾಂತಿ-ಸೌಹಾರ್ದತೆಗೆ ಇಂದಿಗೂ ಪವಿತ್ರ ಅಜ್ಮೀರ್ ಕ್ಷೇತ್ರ ಮಾದರಿಯಾಗಿದೆ. ಅವರ ಮಾದರಿ ಜೀವನ ಎಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸಿದರು.
ಖ್ವಾಜಾ ಬಲ್ಹಾರ್ ಅಲಿ ಶಾ ಚಿಶ್ತಿ ಮದ್ದೂರು ಅವರು ದುವಾಶಿರ್ವಚನಗೈದರು. ಕಾರ್ಯಕ್ರಮದಲ್ಲಿ ಬುರ್ಹಾನ್ ಶಾ ಖಾದ್ರಿ, ನವೀದ್ ಶಾ ಖಾದ್ರಿ, ಅಝೀಝುಲ್ಲಾ ಶಾ ಚಿಶ್ತಿ, ನಸ್ರುಲ್ಲಾ ಶಾ ಖಾದ್ರಿ, ಹಕೀಂ ರೋಶನ್ ಖಾದ್ರಿ, ಖ್ವಾಜಾ ಗೌಹರ್ ಅಲಿ ಶಾ ಚಿಶ್ತಿ, ಖ್ವಾಜಾ ಅತಾ ಅಲಿ ಶಾ ಚಿಶ್ತಿ, ಖ್ವಾಜಾ ಮೊಯಿನ್ ಅಲಿ ಶಾ ಚಿಶ್ತಿ, ಹಾಜಿ ಅಕ್ರಂ ಚಿಶ್ತಿ, ಮೆಹಬೂಬ್ ಚಿಶ್ತಿ, ಅಮಾನುಲ್ಲಾ ಖಾನ್ ಚಿಶ್ತಿ, ಖ್ವಾಜಾ ಯೂಸುಫ್ ಝುಬೈರ್ ಚಿಶ್ತಿ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಕುರ್‍ಆನ್ ಪಾರಾಯಣ, ಧ್ವಜಾರೋಹಣ, ಸಭಾ ಕಾರ್ಯಕ್ರಮ, ಛಟ್ಟಿಯ ಫಾತಿಹಾ, ನಅತೇ ಶರೀಫ್, ಖವ್ವಾಲಿ ಹಾಗೂ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಿತು.
0 comments:
Post a Comment