ವಾಷಿಂಗ್ಟನ್, ಫೆಬ್ರವರಿ 10, 2022 (ಕರಾವಳಿ ಟೈಮ್ಸ್) : ದಿನವಿಡೀ ಸಾಮಾಜಿಕ ಜಾಲ ತಾಣವಾಗಿರುವ ಇನ್‍ಸ್ಟಾಗ್ರಾಮ್‍ನಲ್ಲಿ ಕಾಲಕಳೆಯುತ್ತಾ ಸ್ಕ್ರೋಲ್ ಮಾಡಿ ಕಾಲಹರಣ ಮಾಡುವವರಿಗಾಗಿ ಇನ್‍ಸ್ಟಾಗ್ರಾಮ್ “ಟೇಕ್ ಎ ಬ್ರೇಕ್” ಎಂಬ ಹೊಸ ಫೀಚರ್ ಪರಿಚಯಿಸಿದೆ.
ಇನ್‍ಸ್ಟಾಗ್ರಾಮ್ ತಾಣದಲ್ಲಿ ದಿನವಿಡೀ ಕಾಲ ಕಳೆಯುತ್ತಾ ಇರುವ ಯುವ ಸಮೂಹ ಹೆಚ್ಚುತ್ತಿದ್ದು, ಇದು ಅವರ ಮನಸ್ಸಿನ ಮೇಲೆ ವಿಪರೀತ ಪರಿಣಾಮ ಬೀರುವ ಸಾಧ್ಯತೆ ಬಗ್ಗೆ ಆತಂಕಗೊಂಡಿರುವ ಇನ್‍ಸ್ಟಾಗ್ರಾಮ್ ಈ ಹೊಸ ಫೀಚರ್ ಹೊರತಂದಿದೆ. ಟೇಕ್ ಎ ಬ್ರೇಕ್ ಎಂಬ ಫೀಚರ್ ಬಳಕೆದಾರರಿಗೆ ನಿರ್ದಿಷ್ಟ ಸಮಯಗಳಲ್ಲಿ ವಿರಾಮ ತೆಗೆದುಕೊಳ್ಳುವಂತೆ ಜ್ಞಾಪಿಸುತ್ತದೆ.
ಯುವಜನರ ಯೋಗಕ್ಷೇಮ ನಮಗೆ ಮುಖ್ಯವಾಗಿದೆ. ಹೀಗಾಗಿ ಟೇಕ್ ಎ ಬ್ರೇಕ್ ಫೀಚರ್ ಹೊರತಂದಿದ್ದೇವೆ. ಇದು ಬಳಕೆದಾರರು ಇನ್‍ಸ್ಟಾಗ್ರಾಮ್‍ನಿಂದ ವಿರಾಮ ಪಡೆಯಲು ನೆನಪಿಸುತ್ತದೆ ಎಂದು ಇನ್‍ಸ್ಟಾಗ್ರಾಮ್, ಫೇಸ್‍ಬುಕ್ ಇಂಡಿಯಾದ ಸಾರ್ವಜನಿಕ ನೀತಿ ವ್ಯವಸ್ಥಾಪಕ ನತಾಶಾ ಜೋಗ್ ತಿಳಿಸಿದ್ದಾರೆ.
ಟೇಕ್ ಎ ಬ್ರೇಕ್ ರಿಮೈಂಡರ್ ಇನ್‍ಸ್ಟಾಗ್ರಾಮ್ ಬಳಕೆಯಲ್ಲಿ ದಿನದ ಮಿತಿಯನ್ನು ತಲುಪಿದ ತಕ್ಷಣ ವಿರಾಮ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತದೆ. ಬಳಿಕ ಈ ಸೂಚನೆಯನ್ನು ಬಳಕೆದಾರರು ಮ್ಯೂಟ್ ಮಾಡಬಹುದು.
ಈ ಫೀಚರ್ ಮೊದಲು ಅಮೆರಿಕಾ, ಯುಕೆ, ಐರ್‍ಲ್ಯಾಂಡ್, ಕೆನಡಾ, ಆಸ್ಟ್ರೇಲಿಯಾದಲ್ಲಿ ಲಭ್ಯವಿತ್ತು. ಇದೀಗ ಜಾಗತಿಕವಾಗಿ ಎಲ್ಲಾ ದೇಶಗಳಲ್ಲೂ ಲಭ್ಯವಿದೆ. ಸದ್ಯ ಐಒಎಸ್ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗಿದ್ದು ಶೀಘ್ರವೇ ಆಂಡ್ರಾಯ್ಡ್‍ಗೂ ಬರಲಿದೆ.
0 comments:
Post a Comment