ಮುಂಬೈ, ಫೆಬ್ರವರಿ 06, 2022 (ಕರಾವಳಿ ಟೈಮ್ಸ್) : ಭಾರತದ ಗಾನಕೋಗಿಲೆ ಎಂದೇ ಖ್ಯಾತರಾಗಿದ್ದ ಲತಾ ಮಂಗೇಶ್ಕರ್ (92) ಅವರು ಭಾನುವಾರ (ಫೆ 6) ಬೆಳಗ್ಗೆ ನಿಧನರಾಗಿದ್ದು, ಅವರ ನಿಧನದ ಶೋಕಾರ್ಥ ದೇಶಾದ್ಯಂತ 2 ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ ಅವರಿಗೆ ಇತ್ತೀಚೆಗೆ ಕೋವಿಡ್ ಪಾಸಿಟಿವ್ ಕೂಡಾ ಕಂಡು ಬಂದಿತ್ತು. ಅವರನ್ನು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ನಿಧನರಾಗಿದ್ದಾರೆ.
ಲತಾ ಮಂಗೇಶ್ಕರ್ ಅವರಿಗೆ ಕೋವಿಡ್ ಸೋಂಕಿನ ಸೌಮ್ಯ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಜನವರಿ 8 ರಂದು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ ಪ್ರತೀತ್ ಸಮ್ದನಿ, ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 8 ಗಂಟೆ 12 ನಿಮಿಷಕ್ಕೆ ನಿಧನ ಹೊಂದಿದರು. ಕೋವಿಡ್ ಸೋಂಕಿಗೆ ತುತ್ತಾಗಿ ಜನವರಿ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿ 28 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಬಹು ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಭಾರತ ರತ್ನ ಪುರಸ್ಕೃತ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 2 ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ. ರಾಷ್ಟ್ರಧ್ವಜವು ಅರ್ಧ ಮಟ್ಟದಲ್ಲಿ ಹಾರಾಡಲಿದೆ. ಸರಕಾರಿ ಗೌರವಗಳೊಂದಿಗೆ ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕೇಂದ್ರ ಸರಕಾರದ ಮಾಹಿತಿ ತಿಳಿಸಿದೆ.
ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಮಂಗೇಶ್ಕರ್ ಅವರು 1942ರಲ್ಲಿ 13ನೇ ವಯಸ್ಸಿನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಹಲವಾರು ಭಾರತೀಯ ಭಾಷೆಗಳಲ್ಲಿ 30,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಭಾರತದ ನೈಟಿಂಗೇಲ್ (ಗಾನ ಕೋಗಿಲೆ) ಎಂದು ಕರೆಯಲ್ಪಡುವ ಲತಾ ಮಂಗೇಶ್ಕರ್ ಅವರು ಪದ್ಮಭೂಷಣ, ಪದ್ಮವಿಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಬಹು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ.
ಅವರು ಹಾಡಿದ ‘ಆಯ್ ಮೇರೆ ವತನ್ ಕೆ ಲೋಗೋ’, ‘ಲಗ್ ಜಾ ಗಲೇ’, ‘ಯೇ ಗಲಿಯಾನ್ ಯೇ ಚೌಬಾರಾ’, ‘ಪ್ಯಾರ್ ಕಿಯಾ ತೊ ಡರ್ನಾ ಕ್ಯಾ’, ‘ಬಹೋನ್ ಮೇ ಚಲೇ ಆವೋ’, ‘ವೀರ್ ಜರಾ’ದ ‘ತೇರೆ ಲಿಯೇ’ ಮತ್ತು ಇನ್ನೂ ಅನೇಕ ಹಾಡುಗಳು ಜನಪ್ರಿಯವಾಗಿವೆ.
ತಮ್ಮ 13ನೇ ವಯಸ್ಸಿನಲ್ಲೇ ಹಾಡುವುದಕ್ಕೆ ಪ್ರಾರಂಭಿಸಿದ ಲತಾ ಮಂಗೇಶ್ಕರ್ ಇದುವರೆಗೂ ಹಿಂದಿ ಭಾಷೆಯೊಂದರಲ್ಲೇ ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಗೂ ಭಾರತದ 36 ವಿವಿಧ ಭಾಷೆಗಳಲ್ಲಿ ಹಾಡಿದ ಕೀರ್ತಿ ಅವರದ್ದು. ಕನ್ನಡದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರದ ‘ಬೆಳ್ಳನೆ ಬೆಳಗಾಯಿತು..’ ಹಾಡನ್ನು ಹಾಡಿ ಕನ್ನಡ ಚಿತ್ರರಂಗಕ್ಕೂ ಲತಾ ಪ್ರವೇಶ ಮಾಡಿದ್ದರು.
ವಿದೇಶಿ ಭಾಷೆಗಳಲ್ಲಿಯೂ ಲತಾ ಮಂಗೇಶ್ಕರ್ ಕೂಡ ಹಾಡಿದ್ದಾರೆ. ಭಾರತೀಯ ಭಾಷೆಗಳಲ್ಲಿ ಅವರು ಹೆಚ್ಚಾಗಿ ಹಾಡಿದ್ದು ಹಿಂದಿ, ಮರಾಠಿ ಭಾಷೆಗಳಲ್ಲಿ. ಬಂಗಾಳಿಯಲ್ಲಿ 185 ಹಾಡು ಹಾಡಿದ್ದಾರೆ, ದಾದಾಸಾಹೇಬ್ ಫಾಲ್ಕೆ, ಭಾರತ ರತ್ನ ಸೇರಿ ಸಾಕಷ್ಟು ಪ್ರಶಸ್ತಿಗಳನ್ನು ಲತಾ ಮಂಗೇಶ್ಕರ್ ಪಡೆದುಕೊಂಡಿದ್ದಾರೆ. ಲತಾ ಮಂಗೇಶ್ಕರ್ ಸಹೋದರಿಯರು ಕೂಡ ಗಾಯಕಿಯರು.
ಲತಾ ಅವರ ಪಾರ್ಥಿವ ಶರೀರವನ್ನು ಅಪರಾಹ್ನದವರೆಗೆ ಮುಂಬೈನ ಅವರ ನಿವಾಸದಲ್ಲಿ ಇರಿಸಲಾಗುತ್ತದೆ. ಲತಾ ಮಂಗೇಶ್ಕರ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರ, ರಾಜ್ಯ ನಾಯಕರುಗಳು, ಭಾರತೀಯ ಚಿತ್ರರಂಗದ ಗಣ್ಯರು, ಕಲಾವಿದರು, ದೇಶದ ಜನತೆ ಕಂಬನಿ ಮಿಡಿದಿದ್ದಾರೆ.
ಲತಾಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ಸಂಜೆ 6.30ಕ್ಕೆ ಶಿವಾಜಿ ಪಾರ್ಕ್‍ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
0 comments:
Post a Comment