ಬೆಂಗಳೂರು, ಫೆಬ್ರವರಿ 11, 2022 (ಕರಾವಳಿ ಟೈಮ್ಸ್) : ಹಿಜಾಬ್ ಧಾರಣೆಗೆ ಅವಕಾಶ ಕೇಳಿದ ಬಳಿಕ ಕೇಸರಿ ಶಾಲು ಧಾರಣೆ ನಡೆಸಿದ ಪರಿಣಾಮ ಉಂಟಾದ ಕ್ಯಾಂಪಸ್ ಸಂಘರ್ಷದ ಹಿನ್ನಲೆಯಲ್ಲಿ ಈಗಾಗಲೇ ಶುಕ್ರವಾರ ಫೆ 11) ದವರೆಗೆ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ರಜೆ ಸಾರಿ ಆದೇಶಿಸಿದ್ದ ರಾಜ್ಯ ಸರಕಾರ ಇದೀಗ ಹೈಕೋರ್ಟ್ ಶೀಘ್ರ ಶಾಲಾ-ಕಾಲೇಜು ಆರಂಭ ಮಾಡುವಂತೆ ತಾಕೀತು ಮಾಡಿರುವ ಮಧ್ಯೆಯೇ ಕಾಲೇಜು ತರಗತಿಗಳಿಗೆ ಮತ್ತೆ 3 ದಿನ ರಜೆ ವಿಸ್ತರಿಸಿ ಸರಕಾರ ಅಧಿಕೃತ ಹೊರಡಿಸಿದೆ.
ಕ್ಯಾಂಪಸ್ ಸಂಘರ್ಷದ ಆತಂಕ ನಿವಾರಣೆ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳಿಗೆ ನೀಡಿದ್ದ ರಜೆಯನ್ನು ಮುಂಜಾಗ್ರತಾ ಕ್ರಮವಾಗಿ ಫೆಬ್ರವರಿ 16ರವರೆಗೂ ಮುಂದುವರಿಸಲಾಗಿದೆ ಎಂದು ಸರಕಾರ ಹೊರಡಿಸಿದ ಆದೇಶದಲ್ಲಿ ಘೋಷಿಸಲಾಗಿದೆ. ಸರಕಾರದ ಅಧಿಕೃತ ಆದೇಶದ ಬಗ್ಗೆ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಮಾಹಿತಿ ನೀಡಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲ ವಿಶ್ವವಿದ್ಯಾಲಯಗಳು, ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್ ಮತ್ತು ಡಿಪೆÇ್ಲಮಾ ಕಾಲೇಜುಗಳಿಗೆ ಈ ರಜಾ ಆದೇಶ ಅನ್ವಯಿಸುತ್ತದೆ. ಆದರೆ, ಈ ಅವಧಿಯಲ್ಲಿ ಆನ್ಲೈನ್ ಬೋಧನೆ ಎಂದಿನಂತೆಯೇ ನಡೆಯಲಿದೆ. ಜೊತೆಗೆ, ಈಗಾಗಲೇ ನಡೆಯುತ್ತಿರುವ ಮತ್ತು ನಿಗದಿಯಾಗಿರುವ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ, ಕಾಲೇಜು ಪುನಾರಂಭದ ಬಗ್ಗೆ ಫೆ.16ರಂದು ತೀರ್ಮಾನಿಸಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಹಿಜಾಬ್ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್ ಅಂತಿಮ ಆದೇಶ ನೀಡುವವರೆಗೆ ಯಾವುದೇ ಧಾರ್ಮಿಕ ಉಡುಗೆಗೆ ಅವಕಾಶ ಇಲ್ಲ ಎಂದು ಆದೇಶ ನೀಡುವುದರ ಜೊತೆಗೆ ತಕ್ಷಣವೇ ಶಾಲಾ-ಕಾಲೇಜು ಪ್ರಾರಂಭಿಸಿ ಎಂದು ಸರಕಾರಕ್ಕೆ ತಾಕೀತು ಮಾಡಿತ್ತು. ಕೋರ್ಟ್ ತಾಕೀತು ಹೊರತಾಗಿಯೂ ಸರಕಾರ ಕಾಲೇಜು ತರಗತಿ ಆರಂಭಕ್ಕೆ ಹಿಂದೇಟು ಹಾಕಿದೆ.
0 comments:
Post a Comment