ಬಂಟ್ವಾಳ, ಫೆಬ್ರವರಿ 28, 2022 (ಕರಾವಳಿ ಟೈಮ್ಸ್) : ಇಲ್ಲಿನ ತಾ ಪಂ ತ್ರೈಮಾಸಿಕ ಕೆಡಿಪಿ ಸಭೆಗೆ ಗೈರು ಹಾಜರಾಗಿರುವ ಆರ್ ಟಿ ಒ, ವಲಯ ಅರಣ್ಯ ಹಾಗೂ ಅಂಬೇಡ್ಕರ್ ವಸತಿ ನಿಗಮದ ಅಧಿಕಾರಿಗಳ ಬಗ್ಗೆ ಶಾಸಕ ಯು ರಾಜೇಶ್ ನಾಯ್ಕ್ ತೀವ್ರ ಗರಂ ಆದರು.
ಶಾಸಕರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾ ಪಂ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈ ಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಅವರು ಕೆಡಿಪಿ ಸಭೆಗೆ ಅಧಿಕಾರಿಗಳು ಗೈರಾಗುವುದಾದರೆ ಮೊದಲೇ ತಿಳಿಸಬೇಕು, ಇಲಾಖೆಯ ಮುಖ್ಯಸ್ಥರು ಗೈರು ಹಾಜರಾಗಿ ಕಚೇರಿ ಸಿಬ್ಬಂದಿಗಳನ್ನು ಕಳುಹಿಸುವುದಾದರೆ ನಾನು ಕೂಡ ತನ್ನ ಪಿಎಯನ್ನು ಕಳುಹಿಸಿ ಸಭೆ ಮಾಡಿಸುವಂತಹ ಸನ್ನಿವೇಶ ಬರಬಹುದು ಎಂದು ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ತಾ ಪಂ ಇಒ ರಾಜಣ್ಣಗೆ ಅವರಿಗೆ ಇದೇ ವೇಳೆ ಶಾಸಕರು ಸೂಚಿಸಿದರು. ಶಾಸಕರ ಮಾತಿಗೆ ನೂತನ ವಿಧಾನ ಪರಿಷತ್ ಸದಸ್ಯ ಡಾ ಮಂಜುನಾಥ ಭಂಡಾರಿ ಧ್ವನಿಗೂಡಿಸಿದರು.
ಕೆಎಸ್‍ಆರ್‍ಟಿಸಿ ಬಿ ಸಿ ರೋಡು ಘಟಕದಲ್ಲಿ ಎಲ್ಲಾ ಬಸ್ಸುಗಳನ್ನು ಆಪರೇಟ್ ಮಾಡುವುದಕ್ಕೆ 65 ಮಂದಿ ಚಾಲಕ-ನಿರ್ವಾಹಕರ ಕೊರತೆ ಇದೆ. ಅಲ್ಲದೆ 110 ಬಸ್ಸುಗಳು ಇರಬೇಕಾದ ಜಾಗದಲ್ಲಿ 99 ಬಸ್ಸುಗಳು ಮಾತ್ರ ಇದೆ ಎಂದು ಘಟಕ ವ್ಯವಸ್ಥಾಪಕರು ಸಭೆಯ ಗಮನ ಸೆಳದರು.
ಪುರಸಭಾ ವ್ಯಾಪ್ತಿಯ ಯುಜಿಡಿ ಅನುಷ್ಠಾನದ ಕುರಿತು ತಮಗೂ ಅನೇಕ ಜವಾಬ್ದಾರಿಗಳಿದ್ದು, ಅದರ ಕುರಿತು ಗಮನಹರಿಸುವಂತೆ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರಿಗೆ ಶಾಸಕರು ಸೂಚಿಸಿದರು.
ಶಂಭೂರು ಗ್ರಾಮದಲ್ಲಿ 4.85 ಎಕರೆ ಜಾಗ ಸ್ಮಶಾನಕ್ಕೆ ಮೀಸಲಿಡಲಾಗಿದ್ದು, ಅದಕ್ಕೆ ಗಡಿಗುರುತು ಆಗಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ಆನಂದ ಶಂಭೂರು ಗಮನ ಸೆಳೆದಾಗ ಮಧ್ಯಪ್ರವೇಶಿಸಿದ ತಹಶೀಲ್ದಾರರು ಗಡಿಗುರುತು ಮಾಡುವ ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್ ನೂತನ ಸದಸ್ಯ ಡಾ ಮಂಜುನಾಥ್ ಭಂಡಾರಿ ತನ್ನ ಎಂಎಲ್‍ಸಿ ಅನುದಾನದಲ್ಲಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳ ತುರ್ತು ಅಗತ್ಯಗಳಿಗೆ ಅನುದಾನ ನೀಡುವುದಕ್ಕೆ ನಿರ್ಧರಿಸಿದ್ದು, ಅಂತಹ ಕಾಮಗಾರಿಗಳ ಪಟ್ಟಿ ನೀಡುವಂತೆ ಸಂಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
0 comments:
Post a Comment