ಅಧ್ಯಕ್ಷರಾಗಿ ಬಿ ಸಿ ರೋಡಿನ ಯುವ ನೋಟರಿ-ನ್ಯಾಯವಾದಿ ಅರುಣ್ ರೋಶನ್ ಡಿ’ಸೋಜ ಹಾಗೂ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಬಾಯಿಲ ಅವರು ಎದುರಾಳಿಗಳಿಲ್ಲದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಳೆದ 2020 ರ ಜನವರಿ 25 ರಂದು ಭೂ ಅಭಿವೃದ್ದಿ ಬ್ಯಾಂಕ್ ಆಡಳಿತ ಮಂಡಳಿಯ ನೂತನ ನಿರ್ದೇಶಕರುಗಳ ಆಯ್ಕೆಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಸ್ಪರ್ಧಾ ಕಣದಲ್ಲಿದ್ದ 12 ಮಂದಿ ಅಭ್ಯರ್ಥಿಗಳ ಪೈಕಿ 7 ಮಂದಿ ಕಮಲ ಬೆಂಬಲಿತರು ಹಾಗೂ 5 ಮಂದಿ ಕೈ ಬೆಂಬಲಿತರು ಚುನಾಯಿತರಾಗಿದ್ದರು.
ಆದರೆ ಮತದಾರರ ಪಟ್ಟಿಯಲ್ಲಿ ಮರಣ ಹೊಂದಿದ ಸದಸ್ಯರುಗಳ ಹೆಸರಿರುವುದರಿಂದ ಈ ಚುನಾವಣಾ ಪ್ರಕ್ರಿಯೆ ಬಗ್ಗೆ ಪ್ರಶ್ನಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಸುದರ್ಶನ ಜೈನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಪ್ರಕರಣ ಇದ್ದುದರಿಂದ ಕಳೆದ 2 ವರ್ಷಗಳಿಂದ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಬ್ರೇಕ್ ಬಿದ್ದಿತ್ತು. ಇದೀಗ ನ್ಯಾಯಾಲಯವು ಪ್ರಕರಣವನ್ನು ಇತ್ಯರ್ಥಪಡಿಸಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಶನಿವಾರ ನಿಗದಿಪಡಿಸಿ ತಾಲೂಕು ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಲಾಗಿದೆ.
5 ಮಂದಿ ನಿರ್ದೇಶಕರು ಕಾಂಗ್ರೆಸ್ ಬೆಂಬಲಿತರಾಗಿ ಚುನಾವಣೆ ದಿನ ಆಯ್ಕೆಯಾಗಿದ್ದರೂ ಬಳಿಕ ನಡೆದ ರಾಜಕೀಯ ಸ್ಥಿತ್ಯಂತರದಲ್ಲಿ ರಾಜೇಶ್ ಬಾಳೆಕಲ್ಲು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಕಾಂಗ್ರೆಸ್ ಬೆಂಬಲಿತರ ಸಂಖ್ಯೆ ಕೇವಲ ನಾಲ್ಕಕ್ಕೆ ಸೀಮಿತಗೊಂಡಿತ್ತು. ಕನಿಷ್ಠ ಸಂಖ್ಯೆಯ ನಿರ್ದೇಶಕರನ್ನು ಹೊಂದಿದ ಹಿನ್ನಲೆಯಲ್ಲಿ ಕೈ ಬೆಂಬಲಿತರಾಗಿ ಯಾರೂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಉತ್ಸಾಹ ತೋರದ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿತರು ಎದುರಾಳಿಗಳಿಲ್ಲದೆ ಅವಿರೋಧ ಆಯ್ಕೆಯಾಗಲು ಸಹಕಾರಿಯಾಗಿದೆ.
ಈ ಮೂಲಕ ಕಳೆದ ಸುಮಾರು ಅರ್ಧ ಶತಮಾನಕ್ಕೂ ಅಧಿಕ ಅಂದರೆ ಸುಮಾರು 57 ವರ್ಷಗಳ ಸುದೀರ್ಘ ಕಾಲದಿಂದ ಕಾಂಗ್ರೆಸ್ ಬೆಂಬಲಿತರ ತೆಕ್ಕೆಯಲ್ಲಿದ್ದ ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ‘ಕೈ’ ತಪ್ಪಿದ್ದು, ಇದೀಗ ಇದೇ ಮೊದಲ ಬಾರಿಗೆ ಎಂಬಂತೆ ಕಮಲ ಪಾಳಯದ ಅಧಿಕಾರ ಝಮಾನಾ ಆರಂಭವಾಗಲಿದೆ.
ಚುನಾವಣೆಯಲ್ಲಿ ಆಗಿರುವ ಪರಿಣಾಮಕಾರಿ ಬೆಳವಣಿಗೆಯಿಂದಾಗಿ ಸುದೀರ್ಘ ಅವಧಿಯಲ್ಲಿ ಶಾಶ್ವತ ಅಧ್ಯಕ್ಷರೆಂದೇ ಹೆಸರು ಪಡೆದಿದ್ದ ಸುದರ್ಶನ್ ಜೈನ್ ಅವರ ಅಧಿಕಾರ ಅಂತ್ಯವಾಗಿದೆ. ಇದು ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ನಿರುತ್ಸಾಹಕ್ಕೂ ಕಾರಣವಾಗುವ ಸಾಧ್ಯತೆಗಳಿವೆ ಎಂಬ ಮಾತು ಕೈ ಪಾಳಯದಲ್ಲಿ ಕೇಳಿ ಬರುತ್ತಿದೆ.
ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ರಾಜೇಶ್ ಬಾಳೆಕಲ್ಲು ಅವರ ಪಕ್ಷಾಂತರದಿಂದ ಬಿಜೆಪಿ ಬೆಂಬಲಿತ ನಿರ್ದೇಶಕರ ಸಂಖ್ಯೆ ಇದೀಗ 8ಕ್ಕೇರಿದ್ದು, ಕಾಂಗ್ರೆಸ್ ಬೆಂಬಲಿತರ ಸಂಖ್ಯೆ 4 ಕ್ಕಿಳಿದಿದೆ.
ಭೂ ಅಭಿವೃದ್ದಿ ಬ್ಯಾಂಕಿಗೆ ಆಯ್ಕೆಯಾಗಿರುವ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅಭಿನಂದಿಸಿದ್ದಾರೆ. ಪ್ರಾಮಾಣಿಕತೆ ಹಾಗೂ ಪರಿಶ್ರಮಕ್ಕೆ ಸಂದ ಜಯ ಇದಾಗಿದೆ ಎಂದವರು ಇದೇ ವೇಳೆ ಬಣ್ಣಿಸಿದ್ದಾರೆ.
0 comments:
Post a Comment