ಗಣರಾಜ್ಯೋತ್ಸವ ಆಚರಿಸದೆ ಸಂವಿಧಾನ ಶಿಲ್ಪಿಗೆ ಅವಮಾನ ಖಂಡಿಸಿ ಸಭಾಂಗಣದ ಬಾವಿಗಿಳಿದು ಧರಣಿ ಕೂತ ಬಂಟ್ವಾಳ ಪುರಪಿತೃ - Karavali Times ಗಣರಾಜ್ಯೋತ್ಸವ ಆಚರಿಸದೆ ಸಂವಿಧಾನ ಶಿಲ್ಪಿಗೆ ಅವಮಾನ ಖಂಡಿಸಿ ಸಭಾಂಗಣದ ಬಾವಿಗಿಳಿದು ಧರಣಿ ಕೂತ ಬಂಟ್ವಾಳ ಪುರಪಿತೃ - Karavali Times

728x90

10 February 2022

ಗಣರಾಜ್ಯೋತ್ಸವ ಆಚರಿಸದೆ ಸಂವಿಧಾನ ಶಿಲ್ಪಿಗೆ ಅವಮಾನ ಖಂಡಿಸಿ ಸಭಾಂಗಣದ ಬಾವಿಗಿಳಿದು ಧರಣಿ ಕೂತ ಬಂಟ್ವಾಳ ಪುರಪಿತೃ

ಬಂಟ್ವಾಳ, ಫೆಬ್ರವರಿ 10, 2022 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭೆಯಲ್ಲಿ ಇತ್ತೀಚೆಗೆ ನಡೆದ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸದೆ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಅವಮಾನಿಸಲಾಗಿದೆ ಎಂದು ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್ ಅವರು ಗುರುವಾರ ಪುರಸಭಾ ಸಾಮಾನ್ಯ ಸಭೆಯ ಸಭಾಂಗಣದ ಬಾವಿಯಲ್ಲೇ ಏಕಾಂಗಿಯಾಗಿ ಧರಣಿ ಕುಳಿತು ಉಗ್ರ ಪ್ರತಿಭಟನೆ ನಡೆಸಿದರು. 

ಗುರುವಾರ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿದ್ಯಾಮಾನ ನಡೆದಿದ್ದು, ಈ ಬಗ್ಗೆ ಸದಸ್ಯ ಚೆಂಡ್ತಿಮಾರ್ ಅವರಿಗೆ ಇತರ ಸದಸ್ಯರುಗಳೂ ಕೂಡಾ ಬೆಂಬಲ ವ್ಯಕ್ತಪಡಿಸಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡದೇ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದ್ದು, ಈ ಬಗ್ಗೆ ಸಮರ್ಪಕ ಹಾಗೂ ಜವಾಬ್ದಾರಿಯುತ ಉತ್ತರ ನೀಡಬೇಕು. ಇಲ್ಲದಿದ್ದಲ್ಲಿ ಯಾವುದೇ ಕಾರಣಕ್ಕೂ ಸ್ಥಳದಿಂದ ಕದಲದೆ ಧರಣಿ ಮುಂದುವರಿಸುವುದಾಗಿ ಜನಾರ್ದನ ಚೆಂಡ್ತಿಮಾರ್ ಅವರು ಎಚ್ಚರಿಸಿದರು. 

ಜನವರಿ 26 ರಂದು ದೇಶದ ಗಣರಾಜ್ಯೋತ್ಸವದ ಸಂದರ್ಭ ಬಂಟ್ವಾಳ ಪುರಸಭೆಯಲ್ಲಿ ರಾಷ್ಟ್ರೀಯ ಹಬ್ಬ ಆಚರಿಸದೆ ಮುಖ್ಯಾಧಿಕಾರಿ ಅವರು ಕಚೇರಿಗೇ ಬಾರದೆ, ಪುರಸಭಾ ಸದಸ್ಯರನ್ನು ಹಾಗೂ ಸಿಬ್ಬಂದಿಗಳನ್ನೂ ಆಹ್ವಾನಿಸದೆ ಇಲ್ಲಿನ ಪೌರ ಕಾರ್ಮಿಕ ರಾಮ ಅವರಲ್ಲಿ ಕೇವಲ ತೋರಿಕೆಯ ಧ್ವಜಾರೋಹಣ ನಡೆಸಿದ್ದರು. ಈ  ಒಂದು ಪ್ರಕರಣ ಜಿಲ್ಲೆಯಲ್ಲಿ ಸಾಕಷ್ಟು ರಾದ್ದಾಂತಕ್ಕೆ ಕಾರಣವಾಗಿದ್ದು, ಪುರಸಭಾಧ್ಯಕ್ಷರು ಈ ಬಗ್ಗೆ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿ ಮುಖ್ಯಾಧಿಕಾರಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು. 

ಈ ಬಗ್ಗೆ ಯಾವುದೇ ಕ್ರಮ ಜರುಗದ ಹಿನ್ನಲೆಯಲ್ಲಿ ಗುರುವಾರ ಸದಸ್ಯ ಜನಾರ್ದನ ಚೆಂಡ್ತಿಮಾರ್ ಅವರು ಸಾಮಾನ್ಯ ಸಭೆ ವೇಳೆ ಸಭಾಂಗಣದಲ್ಲೇ ಧರಣಿ ನಡೆಸಿ ಗಮನ ಸೆಳೆದರು. ಧರಣಿಗೆ ಪ್ರತಿಕ್ರಯಿಸಿದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಸಭೆಯಲ್ಲಿ ಕ್ಷಮೆ ಯಾಚಿಸಿ ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದರಾದರೂ ಚೆಂಡ್ತಿಮಾರ್ ತಣ್ಣಗಾಗಲಿಲ್ಲ. ಬಳಿಕ ಹಿರಿಯ ಸದಸ್ಯ ಎ ಗೋವಿಂದ ಪ್ರಭು ಅವರು ಜನಾರ್ದನ ಚೆಂಡ್ತಿಮಾರ್ ಅವರಲ್ಲಿ ಕ್ಷಮೆ ಯಾಚಿಸಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಆಗಿರುವ ಅವಮಾನಕ್ಕೆ ಎಲ್ಲರಿಗೂ ನೋವಿದ್ದು, ಮುಂದಿನ ದಿನಗಳಲ್ಲಿ ಇಂತಹ ತಪ್ಪು ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಜನಾರ್ದನ ಚಂಡ್ತಿಮಾರ್ ತಣ್ಣಗಾದರು. 

ಇದೇ ವೇಳೆ ಮಾತನಾಡಿದ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರು ಬಿ ಸಿ ರೋಡು-ಅಡ್ಡಹೊಳೆ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಇದೀಗ ಮೆಲ್ಕಾರಿನಲ್ಲಿ ಹೆದ್ದಾರಿ ಇಲಾಖೆಯವರು ತರಾತುರಿಯಲ್ಲಿ ಅಗೆತ ಕಾರ್ಯ ಆರಂಭಿಸಿದ್ದಾರೆ. ಇಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಹಾಗೂ ಪೈಪ್ ಲೈನ್ ತೆರವಿಗೆ ಮುಂದಾಗಿದ್ದು, ಇದರಿಂದ ಪುರಸಭೆಯ 4 ವಾರ್ಡ್‍ಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ. ಈ ಕಾರಣಕ್ಕಾಗಿ ಪುರಸಭಾಧಿಕಾರಿಗಳು ಹಾಗೂ ಕಾಮಗಾರಿ ಗುತ್ತಿಗೆಯ ಕೆಎನ್‍ಆರ್ ಸಂಸ್ಥೆಯ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕವೇ ಟ್ಯಾಂಕ್ ಹಾಗೂ ಪೈಪ್ ಲೈನ್ ತೆರವುಗೊಳಿಸುವಂತೆ ಆಗ್ರಹಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಗಣರಾಜ್ಯೋತ್ಸವ ಆಚರಿಸದೆ ಸಂವಿಧಾನ ಶಿಲ್ಪಿಗೆ ಅವಮಾನ ಖಂಡಿಸಿ ಸಭಾಂಗಣದ ಬಾವಿಗಿಳಿದು ಧರಣಿ ಕೂತ ಬಂಟ್ವಾಳ ಪುರಪಿತೃ Rating: 5 Reviewed By: karavali Times
Scroll to Top