ಬಂಟ್ವಾಳ, ಜನವರಿ 07, 2022 (ಕರಾವಳಿ ಟೈಮ್ಸ್) : ಜಾತ್ಯಾತೀತತೆ ಹಾಗೂ ಜಾತೀಯತೆ ಇದುವೇ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವಿನ ದೊಡ್ಡ ವ್ಯತ್ಯಾಸ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರೆ ಸುರಯ್ಯಾ ಅಂಜುಮ್ ಹೇಳಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಸಂಜೆ (ಜ 7) ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶ ಹಾಗೂ ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷರುಗಳ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕಾಗಿ ಸ್ವತಃ ಬಲಿದಾನ ಹಾಗೂ ಕುಟುಂಬವನ್ನೇ ತ್ಯಾಗ ಮಾಡಿದ ಇತಿಹಾಸ ಇರುವ ನಾಯಕರ ದೊಡ್ಡ ಪಟ್ಟಿಯೇ ಕಾಂಗ್ರೆಸ್ ಪಕ್ಷದೊಂದಿಗೆ ತಳುಕು ಹಾಕಿಕೊಂಡಿದ್ದು, ಬಿಜೆಪಿ-ಸಂಘ ಪರಿವಾರದಿಂದ ಒಂದು ಹುಲ್ಲುಕಡ್ಡಿಯೂ ದೇಶಕ್ಕಾಗಿ ಅಳಿಲು ಸೇವೆ ಸಲ್ಲಿಸಿದ ಇತಿಹಾಸ ಇದ್ದರೆ ಸಾಬೀತುಪಡಿಸಿ ಎಂದು ಸವಾಲು ಹಾಕಿದರು.
ದೇಶಕ್ಕಾಗಿ ತ್ಯಾಗ-ಬಲಿದಾನಗೈದ ಮಹಾತ್ಮರ ಸ್ಮರಣೆಯನ್ನು ದೇಶ ಪ್ರತಿ ವರ್ಷವೂ ಮಾಡುತ್ತಿದ್ದರೆ, ಇನ್ನೂ ಜೀವಂತ ಉದಾಹರಣೆಯಾಗಿ ತ್ಯಾಗಮಯಿ ಶ್ರೀಮತಿ ಸೋನಿಯಾ ಗಾಂಧಿ ಇಂದಿಗೂ ನಮ್ಮ ಕಣ್ಣ ಮುಂದಿದ್ದಾರೆ. ಕುಟುಂಬದ ಸದಸ್ಯರುಗಳನ್ನು ದೇಶಕ್ಕಾಗಿ ಕಳೆದುಕೊಂಡಿರುವ ಸೋನಿಯಾ ಗಾಂಧಿ ಕೈಗೆ ಬಂದ ಅಧಿಕಾರವನ್ನೂ ತ್ಯಾಗ ಮಾಡಿ ದೇಶದ ಜನತೆಗಾಗಿ ತಮ್ಮ ಮಕ್ಕಳ ಸಹಿತವಾಗಿ ಪ್ರಸ್ತುತ ಹೋರಾಟದ ಹಾದಿಯಲ್ಲೇ ಸಾಗುತ್ತಿದ್ದಾರೆ ಎಂದ ಸುರಯ್ಯ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ನಾಯಕರು-ಕಾರ್ಯಕರ್ತರು ಕುಗ್ಗದೆ ದೇಶದ ಜನತೆಗಾಗಿ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಿಸಿಕೊಳ್ಳುವಂತೆ ಕರೆ ನೀಡಿದರು.
0 comments:
Post a Comment