ಬಂಟ್ವಾಳ, ಜನವರಿ 30, 2022 (ಕರಾವಳಿ ಟೈಮ್ಸ್) : ಜಗತ್ತಿನಾದ್ಯಂತ ಇಂದು ಮನುಷ್ಯ ನೆಮ್ಮದಿ ರಹಿ ಜೀವನ ನಡೆಸುತ್ತಿದ್ದು, ನಿತ್ಯವೂ ಜೀವನ ಜಂಜಾಟದಲ್ಲಿ ಪೀಕಲಾಟ ನಡೆಸುತ್ತಿದ್ದಾನೆ. ಲೋಕಾಂಡಬರದ ಹಿಂದೆ ನಾಗಾಲೋಟ ಕಿತ್ತಿರುವ ಮಾನವ ಆಧ್ಯಾತ್ಮಿಕತೆಗೆ ಬೆನ್ನು ಹಾಕಿ, ಜಗದೊಡೆಯನ ಅನುಗ್ರಹಗಳನ್ನು ಮರೆತು ಜೀವಿಸುತ್ತಿರುವುದೇ ಈ ಎಲ್ಲಾ ಜಂಜಾಟಗಳಿಗೂ ಕಾರಣವಾಗಿದೆ ಎಂದು ಅಂತರಾಷ್ಟ್ರೀಯ ಭಾಷಣಗಾರ ಹಾಫಿಳ್ ಸಿರಾಜುದ್ದೀನ್ ಅಲ್-ಖಾಸಿಮಿ ಪತ್ತನಾಪುರಂ ತೀವ್ರ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಪಾಣೆಮಂಗಳೂರು ಸಮೀಪದ ನಂದಾವರ ಕೇಂದ್ರ ಜುಮಾ ಮಸೀದಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಮಾಯತುಲ್ ಇಸ್ಲಾಂ ಮದ್ರಸದ ನೂತನ ಕಟ್ಟಡಕ್ಕೆ ಶನಿವಾರ ಸಂಜೆ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಬಳಿಕ ರಾತ್ರಿ ಮಸೀದಿ ವಠಾರದಲ್ಲಿ ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಉಪಾನ್ಯಾಸಗೈದ ಅವರು ಮನುಷ್ಯ ಲೋಕಾಡಂಬರಕ್ಕೆ ಬೆನ್ನು ಹಾಕಿ ಆಧ್ಯಾತ್ಮಿಕತೆಯತ್ತ ಮರಳದೆ ಜೀವನದಲ್ಲಿ ನೆಮ್ಮದಿ-ಸಮಾಧಾನ ಹೊಂದಲು ಸಾಧ್ಯವಿಲ್ಲ. ಆಧ್ಯಾತ್ಮಿಕತೆ ಮಾತ್ರ ಈ ಲೋಕದಲ್ಲಿ ಮಾನವನಿಗೆ ನೆಮ್ಮಿದ ಉಂಟು ಮಾಡಲು ಸಾಧ್ಯ ಎಂದರು.
ಮಸೀದಿಗಳಲ್ಲಿ ಸಮಯಕ್ಕೆ ಸರಿಯಾಗಿ ನಮಾಝ್ ನಿರ್ವಹಿಸಲು ಜನರಿಲ್ಲದೆ ಮಸೀದಿ-ಪ್ರಾರ್ಥನಾ ಮಂದಿರಗಳು ಕೊರಗುತ್ತಿವೆ, ಪವಿತ್ರ ಕುರ್‍ಆನ್ ನಿತ್ಯ ಪಠಣವಿಲ್ಲದೆ ಆಲ್ಮೆರಾಗಳಲ್ಲಿ ಭದ್ರವಾಗಿದೆ. ವೈವಾಹಿಕ ಜೀವನದ ಬಳಿಕ ಯುವ ಸಮೂಹ ಹೆತ್ತವರಿಗೆ ಗೌರವ ಕೊಡದೆ ಹಿರಿ ಜೀವಗಳು ಕಣ್ಣೀರ ಶಾಪ ಹಾಕುತ್ತಿದೆ. ಇವೇ ಮೊದಲಾದ ಮಾನವ ನಡೆಸುತ್ತಿರುವ ಪೈಶಾಚಿಕ ಕೃತ್ಯಗಳು ಇಂದು ಇಡೀ ಜಗತ್ತನ್ನು ಬಾಧಿಸುತ್ತಿದ್ದು, ಜಗದೊಡೆಯನಾದ ಭಗವಂತ ವಿವಿಧ ಸಂಕಷ್ಟಗಳ ಸರಮಾಲೆಗಳನ್ನು ಸುರಿಸುವ ಮೂಲಕ ಮಾನವ ಸಮೂಹವನ್ನು ಕಠಿಣ-ಕಠೋರ ಪರೀಕ್ಷೆಗೆ ಒಳಪಡಿಸುತ್ತಿದ್ದಾನೆ. ಆದರೆ ಆಧ್ಯಾತ್ಮಿಕತೆಯ ಅರಿವು ಕಿಂಚಿತ್ತೂ ಇಲ್ಲದ ಮಾನವ ಒಟ್ಟಾರೆಯಾಗಿ ಪರಿತಪಿಸುತ್ತಿದ್ದಾನೆ. ಕೋಟಿ-ಕೋಟಿ ಆಸ್ತಿ-ಅಂತಸ್ತು ಇದ್ದರೂ ಮನೋ ನೆಮ್ಮದಿ ಇಲ್ಲದೆ ಜೀವನದ ಸುಖ ಅನುಭವಿಸಲಾಗದೆ ವಿವಿಧ ರೀತಿಯಲ್ಲಿ ಮಾನವ ತಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದಾನೆ ಎಂದು ಖಾಸಿಮಿ ವಿಷಾದ ವ್ಯಕ್ತಪಡಿಸಿದರು.
ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ದುವಾಶಿರ್ವಚನಗೈದರು. ಸಮಸ್ತ ಕರ್ನಾಟಕ ಮುಶಾವರ ಕಾರ್ಯದರ್ಶಿ ಹಾಜಿ ಅಬ್ದುಲ್ ಖಾದಿರ್ ಅಲ್-ಖಾಸಿಮಿ ಬಂಬ್ರಾಣ ಮದ್ರಸ ಕಟ್ಟಡಕ್ಕೆ ಶಿಲಾನ್ಯಾಸಗೈದರು. ಮಸೀದಿ ಅಧ್ಯಕ್ಷ ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.
ನಂದಾವರ ಮಸೀದಿ ಖತೀಬ್ ಕಾಸಿಂ ದಾರಿಮಿ, ಮದ್ರಸ ಮುಖ್ಯ ಶಿಕ್ಷಕ ಉಮರ್ ದಾರಿಮಿ ಪಟ್ಟೋರಿ ಮೊದಲಾದವರು ಭಾಗವಹಿಸಿದ್ದರು. ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಬಶೀರ್ ನಂದಾವರ, ಪ್ರಧಾನ ಕಾರ್ಯದರ್ಶಿ ನಾಸಿರ್, ಜೊತೆ ಕಾರ್ಯದರ್ಶಿಗಳಾದ ಖಲಂದರ್ ಶಾಫಿ, ಸೈಫುಲ್ಲಾ, ಮಾಜಿ ಅಧ್ಯಕ್ಷರ ಅಬ್ದುಲ್ ಮಜೀದ್ ನಂದಾವರ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment