ಬಂಟ್ವಾಳ, ಜನವರಿ 07, 2022 (ಕರಾವಳಿ ಟೈಮ್ಸ್) : ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂಬ ವಾಕ್ಯವನ್ನು ಯಥಾವತ್ ಜಾರಿಗೆ ತರಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಅಭಿಪ್ರಾಯಪಟ್ಟರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಸಂಜೆ (ಜ 7) ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶ ಹಾಗೂ ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷರುಗಳ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಯಡಿ ಏಕ ಪ್ರಕಾರವಾಗಿ ಕೊಂಡೊಯ್ಯುವ ಏಕೈಕ ಪಕ್ಷವಾಗಿ ಕಾಂಗ್ರೆಸ್. ಕಾಂಗ್ರೆಸ್ ಪಕ್ಷದಿಂದ ಇದುವರೆಗೆ ಯಾವುದೇ ವರ್ಗದ ಜನರಿಗೆ ಅನ್ಯಾಯವಾಗಿಲ್ಲ. ಕಾಂಗ್ರೆಸ್ ಅಧಿಕಾರದಿಂದ ಎಲ್ಲ ವರ್ಗ ಸಮಾನ ಅವಕಾಶ ಪಡೆದುಕೊಂಡು ಮುಖ್ಯವಾಹಿನಿಗೆ ಬಂದಿದೆ ಎಂದರು.
ಸುಳ್ಳು ಪ್ರಚಾರ, ಅಪಪ್ರಚಾರದಿಂದ ಕಾಂಗ್ರೆಸ್ ಸಾಧನೆಯನ್ನು ಮರೆಮಾಚುವ ಪ್ರಯತ್ನ ನಡೆಸಿದರೆ ಅದು ಹುಚ್ಚು ಪ್ರಯತ್ನವಷ್ಟೆ. ಸುಳ್ಳು ಪ್ರಚಾರ-ಅಪಪ್ರಚಾರದಿಂದ ತಾತ್ಕಾಲಿಕ ಫಲ ಉಣ್ಣಬಹುದಷ್ಟೆ. ಕಾಂಗ್ರೆಸ್ ಪಕ್ಷದ ಸೋಲೂ ಕೂಡಾ ಜನ ಕಾಂಗ್ರೆಸ್ ಸಾಧನೆಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಅವಕಾಶವಾಗಿ ಪರಿವರ್ತನೆಯಾಗಲಿದೆ ಎಂದರು.
ಈ ದೇಶದಲ್ಲಿ ಸಾಮಾಜಿಕ ಸಾಮರಸ್ಯ ನೆಲೆ ನಿಲ್ಲಲು ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಮುಕ್ತ ಮಾಡಲು ದೇಶದಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎಂದ ರಮಾನಾಥ ರೈ ಕಾಂಗ್ರೆಸ್ ನಾಯಕರು ಯಾರೂ ಕೂಡಾ ಅಧಿಕಾರದ ಆಸೆಯಿಂದ ಮಾತ್ರ ಈ ದೇಶದ ಸೇವೆ ಮಾಡಿಲ್ಲ. ದೇಶಕ್ಕಾಗಿ ಮಾತ್ರ ನಿಷ್ಕಳಂಕ ಜನಸೇವೆ ಮಾಡಿದ್ದಾರೆ. ಜನರ ಅಪೇಕ್ಷೆ ಮೇರೆಗೆ ಕೆಲವರು ರಾಜಕೀಯ ನಾಯಕತ್ವ ವಹಿಸಿಕೊಂಡು ಅಧಿಕಾರ ನಡೆಸಿದ್ದಾರಷ್ಟೆ ಎಂದರು.
ಮಹಾತ್ಮಾ ಗಾಂಧಿ ಬಗ್ಗೆ ವೇದಿಕೆಯಲ್ಲಿ ನಿಂತು ಹೊಗಳುವ ಮಂದಿಗಳು ಹೊರಗೆ ಬಂದು ಗಾಂಧಿ ಹಂತಕ ಗೋಡೆಯನ್ನು ದೇಶಪ್ರೇಮಿ ಎಂದು ಕೊಂಡಾಡುತ್ತಾರೆ. ಇಂತಹ ನಯವಂಚಕರ ಬಗ್ಗೆ ಜನ ಎಂದೆಂದಿಗೂ ಎಚ್ಚರಿಕೆಯಿಂದರಬೇಕು ಎಂದ ಮಾಜಿ ಸಚಿವ ರೈ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಯುಗ ಮರಳಿ ಬರುವಂತಾಗಲು ಪಕ್ಷದ ಪ್ರತಿಯೊಂದು ಘಟಕದ ಪ್ರತಿನಿಧಿಗಳೂ ಕೂಡಾ ಶಕ್ತಿ ಮೀರಿ ಕೆಲಸ ಮಾಡಬೇಕು ಎಂದು ಇದೇ ವೇಳೆ ಕರೆ ನೀಡಿದರು.
0 comments:
Post a Comment