ಬೆಂಗಳೂರು, ಜನವರಿ 21, 2022 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಇತ್ತೀಚೆಗೆ ಸರಕಾರ ದಿಢೀರ್ ಆಗಿ ಹೇರಲಾಗಿದ್ದ ವಾರಾಂತ್ಯ ನಿಷೇಧಾಜ್ಞೆ ಹಾಗೂ ರಾತ್ರಿ ನಿಷೇಧಾಜ್ಞೆಯನ್ನು ಶುಕ್ರವಾರ ಮತ್ತೆ ತೆಗೆದುಕೊಂಡ ದಿಢೀಡ್ ನಿರ್ಧಾರದಲ್ಲೇ ವಾಪಾಸು ಪಡೆದುಕೊಂಡಿದೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ತಜ್ಞರು, ಅಧಿಕಾರಿಗಳ ಹಾಗೂ ಸಚಿವರುಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೋವಿಡ್ ನಿಯಂತ್ರಣ ಸಂಬಂಧ ಪ್ರಸ್ತುತ ಇರುವ ಕೊರೊನಾ ಮಾರ್ಗಸೂಚಿಗಳಲ್ಲಿ ಬದಲಾವಣೆ ಹಾಗೂ ಇತರ ನಿರ್ಧಾರಗಳನ್ನು ಪ್ರಕಟಿಸಲಾಗಿದೆ. ಸಭೆಯಲ್ಲಿ ವಾರಾಂತ್ಯ ಕರ್ಫ್ಯೂ £ರ್ಧಾರವನ್ನು ಹಿಂಪಡೆಯಲಾಗಿದೆ.
ಇಂದಿನ ಸಭೆಯಲ್ಲಿ ಸಚಿವರಾದ ಡಾ. ಕೆ ಸುಧಾಕರ್, ಆರಗ ಜ್ಞಾನೇಂದ್ರ, ಆರ್ ಅಶೋಕ್, ಗೋವಿಂದ್ ಕಾರಜೋಳ, ಬಿ ಸಿ ನಾಗೇಶ್ ಭಾಗಿಯಾಗಿದ್ದರು. ವಿಶ್ವ ಆರೋಗ್ಯ ಸಂಸ್ಥೆಯ ಓರ್ವ ಪ್ರತಿನಿಧಿ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಹಿಂದೆ ವೀಕೆಂಡ್, ನೈಟ್ ಕರ್ಫ್ಯೂಗೆ ಹಲವು ನಾಯಕರು, ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವಂತೆ ಹೋಟೆಲ್, ಬಾರ್ ಮಾಲೀಕರು, ಉದ್ಯಮಿಗಳ ಸಂಘ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿತ್ತು. ಈ ಎಲ್ಲ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ತೆರವಿಗೆ ತಜ್ಞರು ಶಿಫಾರಸು ಮಾಡಿದ್ದರು. ಕೊವಿಡ್ ಕಡಿಮೆ ಇರುವ ಜಿಲ್ಲೆಗಳಲ್ಲಿ 50:50 ರೂಲ್ಸ್ ಮಾಡಿ. ಕೊವಿಡ್ ಹೆಚ್ಚಿರುವ ಕಡೆ ನಿರ್ಬಂಧ ಅಗತ್ಯ. ಬೆಂಗಳೂರು ನಗರದಲ್ಲಿ ಕೊವಿಡ್ ಪಾಸಿಟಿವಿಟಿ ದರ ಹೆಚ್ಚಿದೆ. ಅಲ್ಲಿ ಕಟ್ಟೆಚ್ಚರ ಅಗತ್ಯ ಎಂದು ಟಿಎಸಿ ಅಧ್ಯಕ್ಷ ಡಾ. ಸುದರ್ಶನ್ ಸಭೆಯಲ್ಲಿ ವರದಿ ಸಲ್ಲಿಸಲಾಗಿತ್ತು.
ರಾಜ್ಯದಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಎರಡು ವಾರದ ಹಿಂದೆ ರಾಜ್ಯ ಸರಕಾರ ಹಠಾತ್ ಆಗಿ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಘೋಷಣೆ ಮಾಡಿತ್ತು. ಆದರೆ, ಇದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ಆರ್ಥಿಕವಾಗಿ ಈಗಾಗಲೇ ಸಂಕಷ್ಟದಲ್ಲಿದ್ದು, ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ಇದ್ದಲ್ಲಿ ನಾವು ಬೀದಿಗೆ ಬರಲಿದ್ದೇವೆ ಎಂದು ಉದ್ಯಮಿಗಳು ಅಳಲು ತೋಡಿಕೊಂಡಿದ್ದರು.
ಕೋವಿಡ್ ಮೂರನೇ ಅಲೆಯ ವ್ಯಾಪಕವಾಗಿ ಹರಡಿದರೂ ತೀವ್ರತೆ ಕಡಿಮೆ ಇದೆ. ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳೋಣ. ಒಂದು ವೇಳೆ ಆಸ್ಪತ್ರೆ ಸೇರುವವರ ಸಂಖ್ಯೆ ಹೆಚ್ಚಾದರೆ, ಮತ್ತೆ ಬಿಗಿ ಕ್ರಮ ಮುಂದುವರಿಸೋಣ. ಸದ್ಯ ವೀಕೆಂಡ್ ಕರ್ಫ್ಯೂ ತೆರವು ಮಾಡೋಣ ಎಂಬ ಸಲಹೆ ಕೆಲ ಸಚಿವರಿಂದ ಬಂದ ಹಿನ್ನಲೆಯಲ್ಲಿ ಸರಕಾರ ಇದೀಗ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
0 comments:
Post a Comment