ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಅಡ್ಡಲಾಗಿ ಬಿಸಿಎಂ ಇಲಾಖೆಯಿಂದ ಕಂಪೌಂಡ್ : ಕೌನ್ಸಿಲರ್ ಆಕ್ಷೇಪ, ಜಮೀನು ಮಂಜೂರಾತಿ ಆದೇಶ ಪರಿಷ್ಕರಿಸುವಂತೆ ಎಂ.ಎಲ್.ಎ-ಡೀಸಿಗೆ ಕೋರಿಕೆ - Karavali Times ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಅಡ್ಡಲಾಗಿ ಬಿಸಿಎಂ ಇಲಾಖೆಯಿಂದ ಕಂಪೌಂಡ್ : ಕೌನ್ಸಿಲರ್ ಆಕ್ಷೇಪ, ಜಮೀನು ಮಂಜೂರಾತಿ ಆದೇಶ ಪರಿಷ್ಕರಿಸುವಂತೆ ಎಂ.ಎಲ್.ಎ-ಡೀಸಿಗೆ ಕೋರಿಕೆ - Karavali Times

728x90

1 January 2022

ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಅಡ್ಡಲಾಗಿ ಬಿಸಿಎಂ ಇಲಾಖೆಯಿಂದ ಕಂಪೌಂಡ್ : ಕೌನ್ಸಿಲರ್ ಆಕ್ಷೇಪ, ಜಮೀನು ಮಂಜೂರಾತಿ ಆದೇಶ ಪರಿಷ್ಕರಿಸುವಂತೆ ಎಂ.ಎಲ್.ಎ-ಡೀಸಿಗೆ ಕೋರಿಕೆ

ಬಂಟ್ವಾಳ, ಜನವರಿ 01, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ಬಳಿ ಸರಕಾರಿ ಇಲಾಖೆಗಳ ಸಮೂಹ ಕಟ್ಟಡ ಇರುವ ಸರಕಾರಿ ಜಮೀನಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ನಿರ್ಮಿಸಲಾಗುತ್ತಿರುವ ಆವರಣ ಗೋಡೆ ಕಾಮಗಾರಿಯನ್ನು ತಕ್ಷಣ ನಿಲ್ಲಿಸಿ, ಇಲಾಖೆಗೆ ಮಂಜೂರಾಗಿರುವ ಜಮೀನಿನ ನಕ್ಷೆಯನ್ನು ತಿದ್ದುಪಡಿ ಮಾಡಿ ಪರಿಷೃತ ಆದೇಶ ಮಾಡುವಂತೆ ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರು ಜಿಲ್ಲಾಧಿಕಾರಿಗೆ ಲಿಖಿತವಾಗಿ ಕೋರಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕ ಯು ರಾಜೇಶ್ ಅವರಿಗೂ ಲಿಖಿತ ಮನವಿ ಸಲ್ಲಿಸಿರುವ ಅವರು ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ತೊಂದರೆ ಆಗುತ್ತಿರುವ ಹಿನ್ನಲೆಯಲ್ಲಿ ಜಮೀನು ಮಂಜೂರಾತಿ ಆದೇಶ ಪರಿಷ್ಕರಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡುವಂತೆ ಕೋರಿಕೊಂಡಿದ್ದಾರೆ. 

ಬಂಟ್ವಾಳ ಪುರಸಭೆಯ ವಾರ್ಡ್ ಸಂಖ್ಯೆ 24 ರ ವ್ಯಾಪ್ತಿಗೆ ಬರುವ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಸರ್ವೆ ನಂಬ್ರ 29-3ಎಪಿ1 ರಲ್ಲಿ 0.25 ಎಕ್ರೆ ಜಮೀನು ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕಾಗಿ ಮಂಜೂರು ಆಗಿರುತ್ತದೆ. ಪ್ರಕೃತ ಸದ್ರಿ ಇಲಾಖೆಯವರು ಇಲಾಖೆಗೆ ಮಂಜೂರುಗೊಂಡಿರುವ ಸ್ಥಳಕ್ಕೆ ಕಂಪೌಂಡ್ ನಿರ್ಮಿಸುವ ಬಗ್ಗೆ ಕಾಮಗಾರಿ ಆರಂಭಿಸುವ ಹಂತದಲ್ಲಿದ್ದು, ಸದ್ರಿ ಇಲಾಖೆಯವರು ಈ ಜಾಗದಲ್ಲಿ ಕಂಪೌಂಡ್ ನಿರ್ಮಿಸಿದೇ ಆದಲ್ಲಿ ಇದೇ ಜಮೀನಿಗೆ ಹೊಂದಿಕೊಂಡು ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‍ಗೂ ಬಹಳಷ್ಟು ತೊಂದರೆ ಆಗುತ್ತಿದೆ. ಅಂಗನವಾಡಿ ಕೇಂದ್ರಕ್ಕೆ ಆಹಾರ ಸಾಮಾಗ್ರಿ ಸಾಗಾಟ ಮಾಡುವರೇ, ಪುಟಾಣಿ ಮಕ್ಕಳನ್ನು ಪೋಷಕರು ಕರೆ ತರುವ ದಾರಿಗೂ ಅನಾನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿರುವ ಕೌನ್ಸಿಲರ್ ಸಿದ್ದೀಕ್ ಅವರು ತಕ್ಷಣ ಈ ಬಗ್ಗೆ ಪರಿಶೀಲನೆ ನಡೆಸಿ ಬಿಸಿಎಂ ಇಲಾಖೆಗೆ ಮಂಜೂರುಗೊಂಡಿರುವ ಜಮೀನಿನ ನಕ್ಷೆಯನ್ನು ತಿದ್ದುಪಡಿ ಮಾಡಿ ಪರಿಷ್ಕøತ ಆದೇಶ ಮಾಡಿ ಅಂಗನವಾಡಿ ಕೇಂದ್ರಕ್ಕೆ ಹೊಂದಿಕೊಂಡಿರುವ ಜಾಗವನ್ನು ಅಂಗನವಾಡಿ ಕೇಂದ್ರಕ್ಕೆ ಸಂಬಂಧಪಟ್ಟ ಇಲಾಖೆಗೆ ಮಂಜೂರು ಮಾಡಿ ಸದ್ರಿ ಜಾಗ ಅಂಗನವಾಡಿ ಕೇಂದ್ರದ ಅನುಕೂಲಕ್ಕಾಗಿ ದೊರೆಯುವಂತೆ ಕ್ರಮ ಕೈಗೊಂಡು ಪರಿಷ್ಕøತ ಆದೇಶ ಮಾಡುವಂತೆ ಜಿಲ್ಲಾಧಿಕಾರಿಗೆ ಕೋರಿದ್ದಾರೆ. 

ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಪರಿಶಿಷ್ಟ ಜಾತಿ ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್ ಕಟ್ಟಡ, ದೇವರಾಜು ಅರಸು ಹಿಂದುಳಿದ ವರ್ಗಗಳ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಕಟ್ಟಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದ ಅಂಗನವಾಡಿ ಕಟ್ಟಡ ಹಾಗೂ ಆರೋಗ್ಯ ಇಲಾಖೆಗೆ ಸೇರಿದ ದಾದಿಯರ ಕೇಂದ್ರ ಮೊದಲಾದ ಸರಕಾರಿ ಇಲಾಖೆಗಳ ಸಮೂಹ ಕಟ್ಟಡ ಒಂದೆಡೆ ಸರಕಾರಿ ಜಮೀನಿನಲ್ಲಿ ಕಾರ್ಯಾಚರಿಸುತ್ತಿದೆ. ಈ ಎಲ್ಲಾ ಇಲಾಖೆಗಳ ಕಟ್ಟಡಗಳಿಗೆ ಯಾವುದೇ ಪ್ರತ್ಯೇಕ ಕಂಪೌಂಡ್ ಇಲ್ಲದೆ ಇದ್ದು, ಈ ಹಿನ್ನಲೆಯಲ್ಲಿ ಬುಧವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಂಟ್ವಾಳ ತಾಲೂಕು ಅಧಿಕಾರಿ ತಮ್ಮ ಇಲಾಖೆಯ ಒಂದೇ ಕಟ್ಟಡಕ್ಕೆ ಸೀಮಿತಗೊಂಡಂತೆ ಕಂಪೌಂಡ್ ಕಟ್ಟಲು ಗುತ್ತಿಗೆದಾರ ಮುಹಮ್ಮದ್ ಇಕ್ಬಾಲ್ ಅವರಿಗೆ ಸೂಚಿಸಿದ ಹಿನ್ನಲೆಯಲ್ಲಿ ಬುಧವಾರ (ಡಿಸೆಂಬರ್ 29) ಗುತ್ತಿಗೆದಾರ ಜೆಸಿಬಿ ಸಮೇತ ಬಂದು ಅಂಗನವಾಡಿ ಕಟ್ಟಡದ ಸಮೀಪ ಭೂಮಿ ಅಗೆತ ನಡೆಸುತ್ತಿದ್ದರು. ಈ ಸಂದರ್ಭ ಅಂಗನವಾಡಿಯ ದಾರಿ ಬಂದ್ ಆಗುವ ಬಗ್ಗೆ ಅಂಗನವಾಡಿ ನಿರ್ವಾಹಕಿ ಸ್ಥಳೀಯ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಅವರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ತಕ್ಷಣ ಸ್ಥಳಕ್ಕೆ ಬಂದ ಕೌನ್ಸಿಲರ್ ತಹಶೀಲ್ದಾರ್ ಅವರಿಗೆ ದೂರು ನೀಡಿ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಕೌನ್ಸಿಲರ್ ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗೆ ತಡೆ ನೀಡಿ ವಾಪಾಸು ಕಳುಹಿಸಿ ಸಮಸ್ಯೆ ಪರಿಹಾರವಾಗುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದ್ದರು.  ಈ ಸಂದರ್ಭ ಲೋಕೋಪಯೋಗಿ ಇಂಜಿನಿಯರ್ ಜಗದೀಶ್, ಸ್ಥಳೀಯ ವಿಎ ವಿಜೇತಾ, ಗ್ರಾಮ ಸಹಾಯಕಿ ಯಶೋದಾ, ಗುತ್ತಿಗೆದಾರ ಇಕ್ಬಾಲ್ ಹಾಗೂ ಸ್ಥಳೀಯರು ಸ್ಥಳದಲ್ಲಿದ್ದರು. 

ಆದರೆ ಬಳಿಕ ಮತ್ತೆ ಶುಕ್ರವಾರ (ಡಿಸೆಂಬರ್ 30) ಸ್ಥಳಕ್ಕೆ ಬಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಚಿನ್ ಅವರು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರನ್ನು ಝಾಡಿಸಿ ಕಾಮಗಾರಿ ಮುಂದುವರಿಸಲು ಮುಂದಾಗಿದ್ದರು. ಈ ಬಗ್ಗೆ ಅಂಗನವಾಡಿ ಕೇಂದ್ರದ ಸಿಬ್ಬಂದಿಗಳು ಕೌನ್ಸಿಲರ್ ಸಿದ್ದೀಕ್ ಅವರಿಗೆ ಮಾಹಿತಿ ನೀಡಿದಂತೆ ಸ್ಥಳಕ್ಕೆ ಧಾವಿಸಿದ ಅವರು ಬಿಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರಲ್ಲದೆ ಅಂಗನವಾಡಿ ಪುಟಾಣಿಗಳ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಮಾನವೀಯತೆಯಿಂದ ವರ್ತಿಸುವಂತೆ ತಾಕೀತು ಮಾಡಿದ್ದಲ್ಲದೆ ಕಾಮಗಾರಿ ನಿಲ್ಲಿಸಲು ಮತ್ತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದರು.  

ಗದರಿಸಿದ್ದಲ್ಲದೆ, ಪ್ರಕರಣ ದಾಖಲಿಸುವ ಬಗ್ಗೆ ಬೆದರಿಸಿದ್ದರು ಎಂದು ಅಂಗನವಾಡಿ ಕಾರ್ಯಕರ್ತೆಯರು ಜನಪ್ರತಿನಿಧಿ ಹಾಗೂ ಕಂದಾಯ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ದೂರಿಕೊಂಡ ಹಿನ್ನಲೆಯಲ್ಲಿ ಸ್ಥಳದಲ್ಲಿ ಒಂದಷ್ಟು ಮಾತಿನ ವಿನಿಮಯ ಕೂಡಾ ನಡೆಯಿತು. ಬಳಿಕ ಸ್ಥಳದಲ್ಲಿದ್ದ ಪ್ರಭಾಕ ಕಂದಾಯ ನಿರೀಕ್ಷಕ ಧರ್ಮ ಸಾಮ್ರಾಜ್ ಅವರು ತಹಶೀಲ್ದಾರ್ ಸಮ್ಮುಖದಲ್ಲಿ ಮಾತುಕತೆ ನಡೆಸಿ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಬಳಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಎಂಬ ಸಲಹೆ ನೀಡಿ ಯಥಾಸ್ಥಿತಿಗೆ ಸೂಚಿಸಿದರು. 

ಈ ಬಗ್ಗೆ ಪ್ರತಿಕ್ರಯಿಸಿದ ಕೌನ್ಸಿಲರ್ ಸಿದ್ದೀಕ್ ಇಲ್ಲಿರುವ ಎಲ್ಲಾ ಸರಕಾರಿ ಇಲಾಖೆಗಳ ಕಟ್ಟಡಗಳಿಗೆ ಒಂದೇ ದಾರಿ ಇದ್ದು, ಇದೀಗ ಒಂದು ಇಲಾಖೆಗೆ ಸೇರಿದವರು ಕಂಪೌಂಡ್ ಕಟ್ಟುವುದರಿಂದ ಉಳಿದ ಇಲಾಖೆಗಳ ಕಟ್ಟಡಗಳಿಗೆ ದಾರಿ ಬಂದ್ ಆಗುತ್ತದೆ. ಅಲ್ಲದೆ ಅಂಗನವಾಡಿ ಕೇಂದ್ರಕ್ಕೆ ಸರಕಾರದ ಆಹಾರ ಸಾಮಾಗ್ರಿಗಳ ಸಹಿತ ಇತರ ಸಾಮಾನುಗಳನ್ನು ಹೊತ್ತು ಬರುವ ವಾಹನ ಕೂಡಾ ಒಳ ಬಾರದಂತೆ ತಡೆಯಾಗುತ್ತದೆ. ಈ ಹಿನ್ನಲೆಯಲ್ಲಿ ಸರಕಾರಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಜಮೀನು ಮಂಜೂರಾತಿಯನ್ನು ಪರಿಷ್ಕರಿಸಿ ಜಿಲ್ಲಾಧಿಕಾರಿ ಆದೇಶ ನೀಡುವವರೆಗೂ ಕಂಪೌಂಡ್ ಕಟ್ಟುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ಕಾಮಗಾರಿಗೆ ತಡೆ ನೀಡುವಂತೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ಕೋರಲಾಗಿದೆ ಎಂದಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಗ್ಲೆಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಅಡ್ಡಲಾಗಿ ಬಿಸಿಎಂ ಇಲಾಖೆಯಿಂದ ಕಂಪೌಂಡ್ : ಕೌನ್ಸಿಲರ್ ಆಕ್ಷೇಪ, ಜಮೀನು ಮಂಜೂರಾತಿ ಆದೇಶ ಪರಿಷ್ಕರಿಸುವಂತೆ ಎಂ.ಎಲ್.ಎ-ಡೀಸಿಗೆ ಕೋರಿಕೆ Rating: 5 Reviewed By: karavali Times
Scroll to Top