ಬಂಟ್ವಾಳ ಪುರಸಭೆಯಲ್ಲಿ ಪೌರ ಕಾರ್ಮಿಕ ಆರೋಹಣ ಮಾಡಿದ ರಾಷ್ಟ್ರಧ್ವಜ |
ಬಂಟ್ವಾಳ, ಜನವರಿ 26, 2022 (ಕರಾವಳಿ ಟೈಮ್ಸ್) : ದೇಶವೇ ಬುಧವಾರ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದರೆ, ಬಂಟ್ವಾಳ ಪುರಸಭೆಯಲ್ಲಿ ಮಾತ್ರ ಎಂದಿನಂತೆ ಪೌರ ಕಾರ್ಮಿಕರೇ ಧ್ವಜಾರೋಹಣ ಹಾಗೂ ಅವರೋಹಣ ಮಾಡಿ ಕಚೇರಿ ಬಾಗಿಲು ಮುಚ್ಚಿರುವುದು ಇದೀಗ ಇಲ್ಲಿನ ಪುರಸಭಾಧಿಕಾರಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಕೋವಿಡ್ ಸಾಂಕ್ರಾಮಿಕ ವೈರಸ್ಸಿನ 3ನೇ ಅಲೆ ವ್ಯಾಪಕವಾಗಿದ್ದರೂ ತೀವ್ರತೆ ಕಡಿಮೆ ಇರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಘೋಷಿಸಿದ್ದ ವಾರಾಂತ್ಯ ನಿಷೇಧಾಜ್ಞೆಯನ್ನೂ ವಾಪಾಸು ಪಡೆದು ದೇಶದ 73ನೇ ಗಣರಾಜ್ಯೋತ್ಸವ ದಿನವನ್ನು ಸಾಧ್ಯವಾದಷ್ಟು ಮಟ್ಟಿಗೆ ಸಂಭ್ರಮದಿಂದ ಆಚರಿಸಲು ಅನುವು ಮಾಡಿಕೊಡಲಾಗಿತ್ತು. ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳ ಸಹಿತ ಎಲ್ಲಾ ಸರಕಾರಿ ಕಚೇರಿಗಳಲ್ಲೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಸಾರ್ವಜನಿಕ ಭಾಗವಹಿಸುವಿಕೆಯಿಂದ ಗಣರಾಜ್ಯೋತ್ಸವವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಗಿದೆ. ಆದರೆ ಬಂಟ್ವಾಳ ಪುರಸಭೆಯಲ್ಲಿ ಮಾತ್ರ ಮುಖ್ಯಾಧಿಕಾರಿಯೇ ನಾಪತ್ತೆಯಾಗಿರುವ ಹಿನ್ನಲೆಯಲ್ಲಿ ಗಣರಾಜ್ಯ ಸಂಭ್ರಮ ಇರಲಿಲ್ಲ.
ಮಂಗಳವಾರ ಪುರಸಭಾ ಮುಖ್ಯಾಧಿಕಾರಿ ಕಚೇರಿಗೆ ತೆರಳಿದ್ದ ಪೌರ ಕಾರ್ಮಿಕರೋರ್ವರಲ್ಲಿ ನಾಳೆ ಬೆಳಿಗ್ಗೆ ಬಂದು ಧ್ವಜ ಅರಳಿಸಿ ಸಂಜೆ ವೇಳೆಗೆ ಅದನ್ನು ಅವರೋಹಣ ನಡೆಸುವಂತೆ ಸೂಚಿಸಿ ಕಚೇರಿಯಿಂದ ಮನೆಗೆ ತೆರಳಿದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಗಣರಾಜ್ಯೋತ್ಸವ ದಿನವಾದ ಬುಧವಾರ ಕಚೇರಿಗೇ ಬರದೆ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ತೋರಿರುವುದು ಪುರವಾಸಿಗಳಿಗೂ ಮಾಡಿದ ಅವಮಾನವಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಸ್ವತಃ ಮುಖ್ಯಾಧಿಕಾರಿಯೇ ಸ್ಪಷ್ಟ ನಿರ್ಲಕ್ಷ್ಯ ತೋರಿರುವ ಹಿನ್ನಲೆಯಲ್ಲಿ ಕಚೇರಿಯ ಇತರ ಅಧಿಕಾರಿ-ಸಿಬ್ಬಂದಿಗಳಾಗಲೀ ಕಚೇರಿಯತ್ತ ಬರಲೇ ಇಲ್ಲ. ಚುನಾಯಿತ ಪ್ರತಿನಿಧಿಗಳು ಕೆಲವರು ಗಣರಾಜ್ಯೋತ್ಸವ ಆಚರಣೆಗೆಂದು ಕಚೇರಿಯತ್ತ ಬಂದರೆ ಮುಖ್ಯಾಧಿಕಾರಿ ಇಲ್ಲದೆ ಕೇವಲ ಓರ್ವ ಪೌರ ಕಾರ್ಮಿಕ ಮಾತ್ರ ಕಂಬಕ್ಕೆ ಧ್ವಜ ಕಟ್ಟುವುದನ್ನು ಕಂಡು ಮುಖ್ಯಾಧಿಕಾರಿಗೆ ಶಪಿಸುತ್ತಲೇ ಜಾಗ ಖಾಲಿ ಮಾಡುವಂತಾಗಿದೆ ಎನ್ನಲಾಗಿದೆ.
ಬಂಟ್ವಾಳ ಪುರಸಭೆಯಲ್ಲಿ ಜನರಿಂದ ಚುನಾಯಿತರಾದ ಸದಸ್ಯರುಗಳು ಆಡಳಿತ ನಡೆಸುತ್ತಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರುಗಳು ಸುಮಾರು ಸರಿ ಸಮಾನರಾಗಿದ್ದರೂ ಇವರ್ಯಾರನ್ನೂ ಗಣನೆಗೆ ತೆಗೆದುಕೊಳ್ಳದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಗಣರಾಜ್ಯೋತ್ಸವ ಆಚರಣೆ ಬಗ್ಗೆ ಆಡಳಿತದೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಮಾತ್ರ ಕನಿಷ್ಠ ಪಕ್ಷ ಸ್ವತಃ ಕಚೇರಿಗೆ ಬಂದು ಕನಿಷ್ಠ ಮಂದಿಗೆ ಆಹ್ವಾನ ನೀಡಿ ಧ್ವಜಾರೋಹಣವನ್ನೇ ಮಾಡದೆ ಅವಮಾನ ಮಾಡಿರುವುದು ದೇಶದ ಗಣರಾಜ್ಯೋತ್ಸವಕ್ಕೆ ಬಗೆದ ಅತ್ಯಂತ ಘೋರ ತಾತ್ಸಾರವಾಗಿದೆ ಎಂಬ ಆಕ್ರೋಶವನ್ನು ಪುರಪಿತೃರು ಹೊರ ಹಾಕಿದ್ದಾರೆ.
ರಾಷ್ಟ್ರೀಯ ಹಬ್ಬವನ್ನೇ ಆಚರಿಸದೆ ಸ್ಪಷ್ಟ ನಿರ್ಲಕ್ಷ್ಯ, ಬೇಜವಾಬ್ದಾರಿ, ಅವಮಾನ ಎಸಗಿದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ವಿರುದ್ದ ಪುರಪಿತೃರು ಜಿಲ್ಲಾಧಿಕಾರಿಗೆ ಮೌಖಿಕವಾಗಿ ದೂರಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಡೀಸಿ ನೀಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಯಿಸಿದ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಕಳೆದೊಂದು ವರ್ಷದಿಂದಲೂ ಮುಖ್ಯಾಧಿಕಾರಿ ಚುನಾಯಿತ ಪ್ರತಿನಿಧಿಗಳೊಂದಿಗೆ ಯಾವುದೇ ಹೊಂದಾಣಿಕೆ ಇಲ್ಲದೆ ನಿರ್ಲಕ್ಷ್ಯ, ಅವಮಾನ, ಬೇಜವಾಬ್ದಾರಿ ತೋರಿದ ಹಿನ್ನಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ ಬಗ್ಗೆಯೂ ಚರ್ಚಿಸಿಲ್ಲ. ಕಚೇರಿಯ ಮುಖ್ಯಸ್ಥರಾಗಿ, ಸರಕಾರಿ ಅಧಿಕಾರಿಯಾಗಿ ಅವರು ಅಧ್ಯಕ್ಷರಿಗಾಗಲೀ, ಇತರ ಸದಸ್ಯರು ಹಾಗೂ ಕಚೇರಿ ಸಿಬ್ಬಂದಿಗಳಿಗಾಗಲೀ ಈ ಬಗ್ಗೆ ನೋಟೀಸು ಯಾ ಮಾಹಿತಿ ನೀಡಿಲ್ಲ ಎಂದಿದ್ದಾರೆ.
ಈ ಹಿಂದೊಮ್ಮೆ ಪುರಸಭೆಯಲ್ಲಿ ಪೌರ ಕಾರ್ಮಿಕರ ದಿನ ಆಚರಿಸದ ಬಗ್ಗೆ ಇದೇ ಅಧಿಕಾರಿ ವಿರುದ್ಧ ಕಚೇರಿಯ ಪೌರ ಕಾರ್ಮಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕೊನೆ ಗಳಿಗೆಯಲ್ಲಿ ಪೌರ ಕಾರ್ಮಿಕರೇ ಸ್ವತಃ ಉಪಾಹಾರ ತರಿಸಿ ದಿನವನ್ನು ಆಚರಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತಲ್ಲದೆ ಈ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯಾಧಿಕಾರಿ ಮುಸ್ಲಿಮರು ತಯಾರಿಸಿ ಭೋಜನ ಸ್ವೀಕರಿಸುವುದಿಲ್ಲ ಎಂ ಹೇಳಿಕೆ ನೀಡಿದ ಧ್ವನಿಮುದ್ರಣ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ವೈರಲ್ ಆಗಿ, ಈ ವಿಷಯ ಪುರಸಭೆಯ ಮಾಸಿಕ ಸಭೆಯಲ್ಲೂ ಪ್ರಸ್ತಾಪ ಆಗಿ ತೀವ್ರ ಚರ್ಚೆಗೂ ಕಾರಣವಾಗಿತ್ತು. ಬಳಿಕ ಸದಸ್ಯರು ಈ ಬಗ್ಗೆ ಡೀಸಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದರು. ಆದರೂ ಈ ಬಗ್ಗೆ ಇದುವರೆಗೂ ಕ್ರಮ ಜರುಗದ ಹಿನ್ನಲೆಯಲ್ಲಿ ಮತ್ತೆ ಮುಖ್ಯಾಧಿಕಾರಿ ಆನೆ ನಡೆದದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಪುರಪಿತೃರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಶಾಸಕರ ಸಹಿತ ಜಿಲ್ಲಾಧಿಕಾರಿ, ಮಂಗಳೂರು ಸಹಾಯಕ ಆಯುಕ್ತರು, ಜಿಲ್ಲಾ ನಗರಾಭಿವೃದ್ದಿ ಕೋಶದ ಅಧಿಕಾರಿಗಳು ದೇಶದ ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ದಿನಕ್ಕೆ ಘೋರ ಅಪಮಾನ ಎಸಗಿರುವ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ಅವರ ವಿರುದ್ದ ಕಠಿಣ ಕ್ರಮ ಕೈಗೊಂಡು ತಕ್ಷಣ ಇಲ್ಲಿಂದ ಎತ್ತಂಗಡಿ ಮಾಡುವಂತೆ ಬಲವಾದ ಆಗ್ರಹ ಕೇಳಿ ಬಂದಿದೆ.
0 comments:
Post a Comment