ಮೇಕೆದಾಟು ಪಾದಯಾತ್ರೆ ನಿರ್ಬಂಧ ಜಾರಿಯೇ ಹೊರತು ಕೋವಿಡ್ ನಿರ್ಬಂಧವೂ ಅಲ್ಲ, ಓಮಿಕ್ರಾನ್ ನಿರ್ಬಂಧವೂ ಅಲ್ಲ : ಎಂ ಎಸ್ ಮುಹಮ್ಮದ್ ವಿಶ್ಲೇಷಣೆ - Karavali Times ಮೇಕೆದಾಟು ಪಾದಯಾತ್ರೆ ನಿರ್ಬಂಧ ಜಾರಿಯೇ ಹೊರತು ಕೋವಿಡ್ ನಿರ್ಬಂಧವೂ ಅಲ್ಲ, ಓಮಿಕ್ರಾನ್ ನಿರ್ಬಂಧವೂ ಅಲ್ಲ : ಎಂ ಎಸ್ ಮುಹಮ್ಮದ್ ವಿಶ್ಲೇಷಣೆ - Karavali Times

728x90

5 January 2022

ಮೇಕೆದಾಟು ಪಾದಯಾತ್ರೆ ನಿರ್ಬಂಧ ಜಾರಿಯೇ ಹೊರತು ಕೋವಿಡ್ ನಿರ್ಬಂಧವೂ ಅಲ್ಲ, ಓಮಿಕ್ರಾನ್ ನಿರ್ಬಂಧವೂ ಅಲ್ಲ : ಎಂ ಎಸ್ ಮುಹಮ್ಮದ್ ವಿಶ್ಲೇಷಣೆ

 ಬಂಟ್ವಾಳ, ಜನವರಿ 05, 2022 (ಕರಾವಳಿ ಟೈಮ್ಸ್) : ಸಿಎಂ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಮಂಗಳವಾರ ರಾತ್ರಿ ದಿಢೀರ್ ಆಗಿ ಘೋಷಿಸಿದ ನಿಷೇಧಾಜ್ಞೆಗಳು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದ ನಿರ್ಬಂಧಗಳೇ ಹೊರತು ಇದರ ಹಿಂದೆ ಕೋವಿಡ್ ನಿಯಂತ್ರಣದ ಅಥವಾ ಓಮಿಕ್ರಾನ್ ನಿಯಂತ್ರಣದ ಯಾವುದೇ ಉದ್ದೇಶಗಳು ಇದ್ದಂಗೆ ಕಂಡು ಬರುತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿ ಪಂ ಮಾಜಿ ಸದಸ್ಯ ಎಂ ಎಸ್ ಮುಹಮ್ಮದ್ ಝಾಡಿಸಿದರು. 

ಬುಧವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯ ಬಿಜೆಪಿ ಸರಕಾರ ಯಡಿಯೂರಪ್ಪ ಅವರನ್ನು ಸಿ ಎಂ ಸ್ಥಾನದಿಂದ ಬದಲಾಯಿಸಿದ್ದೇ ಒಂದು ಸಾಧನೆ ಹೊರತು ಜನಪರವಾದ  ಅಭಿವೃದ್ದಿ ಕಾರ್ಯಗಳ ಮೂಲಕ ಯಾವುದೇ ಸಾಧನೆ ಮಾಡಿಲ್ಲ. ಸರಕಾರದ ವೈಫಲ್ಯ ಮುಚ್ಚಿ ಹಾಕಲು ಹಾಗೂ ಜನರ ಮನಸ್ಸನ್ನು ಬೇರೆಡೆ ತಿರುಗಿಸಲು ಸರಕಾರ ಕೋವಿಡ್ ಸಾಂಕ್ರಾಮಿಕ ವೈರಸ್ಸನ್ನು ಬಳಸಿಕೊಂಡು ಲಾಕ್ ಡೌನ್, ವೀಕೆಂಡ್ ಕಫ್ರ್ಯೂ, ನೈಟ್ ಕಫ್ರ್ಯೂ ಮೊದಲಾದ ಅವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು. 

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಪೂರ್ಣ ಅವಧಿಯ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ ಅಭಿವೃದ್ದಿಯ ಪರ್ವ ಕಾಲ ಆರಂಭವಾಗಿತ್ತು. ಹಲವು ಅಭಿವೃದ್ದಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆದು ಇನ್ನು ಹಲವು ಅಭಿವೃದ್ದಿ ಪರ ಕಾರ್ಯಗಳು ಪೂರ್ತಿಯಾಗುವ ಹಂತದಲ್ಲಿತ್ತು. ಅದೇ ರೀತಿ ಬಂಟ್ವಾಳದಲ್ಲಿ ರಮಾನಾಥ ರೈ ಶಾಸಕರು-ಸಚಿವರಾಗಿದ್ದಾಗ ಇಲ್ಲೂ ಅಭಿವೃದ್ದಿಯ ಸುವರ್ಣ ಯುಗ ಮುಂದುವರೆದಿತ್ತು. ಆದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೇರಿದ ಬಳಿಕ ಎಲ್ಲಾ ಅಭಿವೃದ್ದಿ ಕಾರ್ಯಗಳೂ ಸ್ಥಗಿತಗೊಂಡು ಇನ್ನೆಂದೂ ಕಂಡು ಕೇಳರಿಯದ ರೀತಿಯ ಹಿನ್ನಡೆ ಅನುಭವಿಸಿದೆ. ಬಂಟ್ವಾಳದಲ್ಲೂ ಅದೇ ರೀತಿಯ ಪರಿಸ್ಥಿತಿ ಉಂಟಾಗಿದೆ ಎಂದು ಎಂ ಎಸ್ ಮುಹಮ್ಮದ್ ವಿಶ್ಲೇಷಿಸಿದರು.

ರಾಜ್ಯದ ಜನ ತುತ್ತು ಅನ್ನಕ್ಕೂ ಪರದಾಟ ನಡೆಸುತ್ತಿರುವ ಪರಿಸ್ಥಿತಿ ಇದೆ. ಯುವ ಜನತೆ ಉದ್ಯೋಗವಿಲ್ಲದೆ ಅಲೆದಾಟ ನಡೆಸುತ್ತಿದ್ದಾರೆ. ವ್ಯಾಪಾರಸ್ಥರು, ವ್ಯವಹಾರಸ್ಥರು ವ್ಯವಹಾರ ನಿರೀಕ್ಷಿತ ಮಟ್ಟದಲ್ಲಿಲ್ಲದೆ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಅಭಿವೃದ್ದಿ ಇಲ್ಲದೆ ಪರಿತಪಿಸುತ್ತಿದ್ದರೆ, ವಿದ್ಯಾರ್ಥಿ ಪೋಷಕರು ಮಕ್ಕಳ ಶಾಲಾ ಶುಲ್ಕ ಪಾವತಿಸಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೂ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗುವ ಹೃದವಂತಿಕೆ ತೋರದ ಸರಕಾರ ಜನರನ್ನು ಮತ್ತಷ್ಟು ಸಂಕಷ್ಟದ ಕೂಪಕ್ಕೆ ತಳ್ಳುವ ಕ್ರಮಕ್ಕೆ ಮಾತ್ರ ಮುಂದಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮೇಕೆದಾಟು ಪಾದಯಾತ್ರೆ ನಿರ್ಬಂಧ ಜಾರಿಯೇ ಹೊರತು ಕೋವಿಡ್ ನಿರ್ಬಂಧವೂ ಅಲ್ಲ, ಓಮಿಕ್ರಾನ್ ನಿರ್ಬಂಧವೂ ಅಲ್ಲ : ಎಂ ಎಸ್ ಮುಹಮ್ಮದ್ ವಿಶ್ಲೇಷಣೆ Rating: 5 Reviewed By: karavali Times
Scroll to Top