ಬೆಂಗಳೂರು, ಜನವರಿ 24, 2022 (ಕರಾವಳಿ ಟೈಮ್ಸ್) : ರಾಜ್ಯ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದ ಹಿನ್ನಲೆಯಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ರಾಜ್ಯ ಸರಕಾರ ವಾಪಾಸು ಪಡೆದಿದೆ. ಹೊಸ ಆದೇಶದ ಪ್ರಕಾರ, ಸ್ಥಳೀಯ ಭಾಷೆಯನ್ನು ತೆಗೆದುಕೊಳ್ಳಲು ಬಯಸದ ವಿದ್ಯಾರ್ಥಿಗಳನ್ನು ಉಚ್ಚ ನ್ಯಾಯಾಲಯದ ಮುಂದಿನ ಆದೇಶದವರೆಗೆ ಒತ್ತಾಯಿಸಲಾಗುವುದಿಲ್ಲ.
ರಾಜ್ಯ ಸರಕಾರದ ಹೊಸ ಆದೇಶದಂತೆ ಈಗಾಗಲೇ ಕೋರ್ಸಿಗೆ ಸೇರಿರುವ ವಿದ್ಯಾರ್ಥಿಗಳಿಗೆ ಕನ್ನಡದ ಬದಲಿಗೆ ತಮ್ಮ ಆಯ್ಕೆಯ ಭಾಷೆಯನ್ನು ಆಯ್ಕೆ ಮಾಡಲು ಅವಕಾಶವಿದೆ. ಹೊಸ ಕೋರ್ಸಿಗೆ ಸೇರುವ ವಿದ್ಯಾರ್ಥಿಗಳಿಗೆ ಹಾಜರಾತಿಯನ್ನು ಸರಿ ಹೊಂದಿಸಲಾಗುತ್ತದೆ.
ಜನವರಿ 21ರ ಸುತ್ತೋಲೆಯನ್ನು ಎಲ್ಲಾ ಸಾರ್ವನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ರಿಜಿಸ್ಟ್ರಾರ್‍ಗಳಿಗೆ ಕಳುಹಿಸಲಾಗಿದೆ. ಈ ನಿಟ್ಟಿನಲ್ಲಿ ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರಿಗೂ ಸೂಚನೆ ನೀಡಲಾಗಿದೆ.
2021ರ ಆಗಸ್ಟ್ 7ರಂದು, ರಾಜ್ಯ ಸರಕಾರವು ರಾಜ್ಯದಲ್ಲಿ ಪದವಿಪೂರ್ವ ಕೋರ್ಸ್‍ಗಳನ್ನು ತೆಗೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸಿತ್ತು. ಈ ಆದೇಶವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಅನುಷ್ಠಾನಕ್ಕೆ ಅನುಗುಣವಾಗಿದೆ ಎಂದು ಸರಕಾರ ಹೇಳಿಕೊಂಡಿತ್ತು. ಶಾಲೆಯಲ್ಲಿ ಕನ್ನಡ ಕಲಿಯದ ವಿದ್ಯಾರ್ಥಿಗಳಿಗೆ ಒಂದು ಸೆಮಿಸ್ಟರ್‍ಗೆ ಕ್ರಿಯಾತ್ಮಕ ಕನ್ನಡವನ್ನು ಅಧ್ಯಯನ ಮಾಡುವಂತೆ ಸರಕಾರ ಹೇಳಿತ್ತು.
ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಇತರ ಮೂರು ಸಂಸ್ಥೆಗಳು ಮತ್ತು ಐದು ವಿದ್ಯಾರ್ಥಿಗಳು ಸರಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿಗಳನ್ನು ಸಲ್ಲಿಸಿದ್ದರು. ಈ ಹಂತದಲ್ಲಿ ಭಾಷೆಯನ್ನು ಕಡ್ಡಾಯಗೊಳಿಸಲು ರಾಜ್ಯ ಸರಕಾರ ಒತ್ತಾಯಿಸುವುದಿಲ್ಲ ಎಂದು ಹೈಕೋರ್ಟ್ ಈ ಹಿಂದೆ ಹೇಳಿತ್ತು. ಮುಂದಿನ ಆದೇಶದವರೆಗೆ ಕನ್ನಡ ಭಾಷೆಯನ್ನು ಕಲಿಯಲು ಇಷ್ಟಪಡದ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕಲಿಯುವಂತೆ ಒತ್ತಾಯಿಸುವುದಿಲ್ಲ ಎಂದು ಸರಕಾರ ನ್ಯಾಯಾಲಯಕ್ಕೆ ಹೇಳಿದೆ.
0 comments:
Post a Comment