ಬಂಟ್ವಾಳ, ಜನವರಿ 19, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಾರಾಜೆ ನಿವಾಸಿ ಅಬ್ದುಲ್ ಜಲೀಲ್ ಯಾನೆ ಕನ್ವರ್ಷನ್ ಜಲೀಲ್ (50) ಅವರು ಮಾನಸಿಕವಾಗಿ ನೊಂದುಕೊಂಡು ಮಂಗಳವಾರ ರಾತ್ರಿ ಗೂಡಿನಬಳಿ ಹೊಸ ಸೇತುವೆ ಮೇಲಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಗೂಡಿನಬಳಿ ಹೊಸ ನೇತ್ರಾವತಿ ಸೇತುವೆ ಬಳಿ ಬಂದು ಮನೆಗೆ ಮೊಬೈಲ್ ಕರೆ ಮಾಡಿ ನಾನು ಗೂಡಿನಬಳಿಯಲ್ಲಿದ್ದೇನೆ ಎಂದು ಹೇಳಿ ಕರೆ ಕಟ್ ಮಾಡಿ ಮೊಬೈಲ್ ಹಾಗೂ ಬೈಕ್ ಸೇತುವೆ ಮೇಲಿಟ್ಟು ನದಿಗೆ ಹಾರಿದ್ದಾರೆ ಎನ್ನಲಾಗಿದೆ.
ಬುಧವಾರ ಬೆಳಿಗ್ಗೆ ಸ್ಥಳೀಯ ಪ್ರಾಣರಕ್ಷಕ ಯುವಕರಾದ ಸತ್ತಾರ್ ಗೂಡಿನಬಳಿ ಹಾಗೂ ಮುಹಮ್ಮದ್ ಯಾನೆ ಮಮ್ಮು ಗೂಡಿನಬಳಿ ಅವರು ನದಿಯಲ್ಲಿ ಹುಡುಕಾಡಿ ಮೃತದೇಹ ಪತ್ತೆಹಚ್ಚುವಲ್ಲಿ ಸಫಲರಾಗಿದ್ದಾರೆ.
ಜಲೀಲ್ ಅವರು ಭೂ ಪರಿವರ್ತನೆ ಸಹಿತ ಭೂಮಿ ಸಂಬಂಧಿ ಕೆಲಸ ಕಾರ್ಯಗಳನ್ನು ನಡೆಸುವ ಮೂಲಕ ಸ್ಥಳೀಯವಾಗಿ ಕನ್ವರ್ಷನ್ ಜಲೀಲ್ ಎಂದೇ ಚಿರಪರಿಚಿತರಾಗಿದ್ದಾರು. ಆರ್ಥಿಕವಾಗಿ ಸಂತೃಪ್ತ ಕುಟುಂಬ ಜೀವನ ನಡೆಸುತ್ತಿದ್ದ ಜಲೀಲ್ ಇತ್ತೀಚೆಗೆ ಕೆಲ ಸಮಯಗಳಿಂದ ಒಂದಷ್ಟು ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲಿ ಮಾನಸಿಕವಾಗಿ ನೊಂದುಕೊಂಡಿದ್ದರು ಎಂದು ಪರಿಚಿತರು ತಿಳಿಸಿದ್ದಾರೆ.
ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಅಥವಾ ಇನ್ಯಾವುದೋ ಕಾರಣಗಳಿದೆಯೇ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
0 comments:
Post a Comment