ನವದೆಹಲಿ, ಜನವರಿ 19, 2022 (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಳಿಸಲಾಗಿರುವ ನಿಗದಿತ ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ಫೆಬ್ರವರಿ 28 ರವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬುಧವಾರ ಅಧಿಸೂಚನೆ ಹೊರಡಿಸಿದೆ.
ಗೃಹ ಸಚಿವಾಲಯದಿಂದ ಅನುಮತಿ ಪಡೆದವರು ಮಾತ್ರವೇ ನಿಗದಿತ ವಿಮಾನದಲ್ಲಿ ಪ್ರಯಾಣಿಸಬಹುದಾಗಿದ್ದು, ಮತ್ತು ಈ ನಿರ್ಬಂಧವು ಕಾರ್ಗೋ ವಿಮಾನ ಸೇವೆಗೆ ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಇದೇ ವೇಳೆ ಸ್ಪಷ್ಟಪಡಿಸಿದೆ.
ಡಿಜಿಸಿಎ ಕಳೆದ ಡಿಸೆಂಬರ್ 15 ರಿಂದ ನಿಗದಿತ ಅಂತರಾಷ್ಟ್ರೀಯ ವಿಮಾನ ಸೇವೆ ಆರಂಭಿಸಲು ನಿರ್ಧರಿಸಿತ್ತು. ಆದರೆ ಕೊರೋನಾ ಹೊಸ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ವರದಿಯಾದ ನಂತರ ತನ್ನ ನಿರ್ಧಾರ ಬದಲಿಸಿದ್ದು, ಫೆಬ್ರವರಿ 28ರವರೆಗೆ ಅಂತರಾಷ್ಟ್ರೀಯ ವಿಮಾನಗಳ ಮೇಲಿನ ನಿರ್ಬಂಧವನ್ನು ಮುಂದುವರೆಸಿದೆ.
ಕಳೆದ 2020ರ ಮಾರ್ಚ್ 25ರಂದು ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ ನಂತರ ಎಲ್ಲಾ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿತ್ತು.
ಮೇ 2020 ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತು ಜುಲೈಯಿಂದ ಆಯ್ದ ದೇಶಗಳೊಂದಿಗೆ ದ್ವಿಪಕ್ಷೀಯ ‘ಏರ್ ಬಬಲ್’ ವ್ಯವಸ್ಥೆಗಳ ಅಡಿಯಲ್ಲಿ ವಿಶೇಷ ಅಂತರಾಷ್ಟ್ರೀಯ ವಿಮಾನಯಾನವನ್ನು ಅನುಮತಿಸಲಾಗಿತ್ತು.
0 comments:
Post a Comment