ಬೆಂಗಳೂರು, ಜನವರಿ 07, 2022 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಇನ್ನು ಮುಂದೆ ಪೂರ್ಣ ಪ್ರಮಾಣದ ಲಾಕ್ ಡೌನ್ ಮಾಡುವ ಯಾವುದೇ ಚಿಂತನೆ ಸರಕಾರದ ಮುಂದಿಲ್ಲ. ಲಾಕ್ ಡೌನ್ ಕಳೆದುಹೋಗಿರುವ ನೀತಿ ಕೋವಿಡ್ ನಿಯಂತ್ರಣದ ಹಿನ್ನಲೆಯಲ್ಲಿ ಇನ್ನೇನಿದ್ದರೂ ಕಠಿಣ ನಿರ್ಬಂಧ, ನಿಯಮಗಳ ಕಟ್ಟುನಿಟ್ಟಿನ ಪಾಲನೆಯಿಂದಲೇ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ಇಂದಿನಿಂದ ಮುಂದಿನ ಎರಡು ವಾರಗಳ ಕಾಲ ಸರಕಾರ ಮತ್ತೆ ಕೋವಿಡ್ ನಿರ್ಬಂಧ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಜನರಲ್ಲಿ ಮನೆ ಮಾಡಿರುವ ಲಾಕ್ ಡೌನ್ ಆತಂಕ ನಿವಾರಣೆ ನಿಟ್ಟಿನಲ್ಲಿ ಆರೋಗ್ಯ ಸಚಿವರ ಇಂದಿನ ಹೇಳಿಕೆ ಮಹತ್ವ ಪಡೆದಿದೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವರು ಕೊರೋನಾ ಮೂರನೇ ಅಲೆಯ ಈ ಸಂದರ್ಭದಲ್ಲಿ ಜನರು ಸ್ವಆಸಕ್ತಿಯಿಂದ ಮುಂದೆ ಬಂದು ಕೋವಿಡ್ ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳಬೇಕು ಎಂದರು. ಈಗಾಗಲೇ 25 ಸಾವಿರ ಮಕ್ಕಳಿಗೆ ಕೋವಿಡ್ ಲಸಿಕೆಯ ಮೊದಲನೇ ಡೋಸ್ ನೀಡಲಾಗಿದ್ದು ಕೋವಿಡ್ ಲಸಿಕೆ ನೀಡಿಕೆಯಲ್ಲಿ ಕರ್ನಾಟಕ ಇಡೀ ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಉಡುಪಿ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಅತಿಹೆಚ್ಚು ಕೋವಿಡ್ ಪಾಸಿಟಿವ್ ದರ ವರದಿಯಾಗುತ್ತಿದೆ. ಈ ಜಿಲ್ಲೆಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು ಎಂದರು.
ಓಮಿಕ್ರಾನ್ ಸೋಂಕಿನ ತೀವ್ರತೆ ಗಂಭೀರ ಸ್ವರೂಪದಲ್ಲಿಲ್ಲ ಎಂಬುದು ನಿಜ. ಆದರೆ ಕೋವಿಡ್ ಎರಡೂ ಲಸಿಕೆ ಪಡೆಯದವರಲ್ಲಿ ಸೋಂಕು ತಗುಲಿದರೆ ತೀವ್ರತೆ ಹೆಚ್ಚಾಗುತ್ತದೆ. ಸಾವು ಕೂಡ ಸಂಭವಿಸಲು ಸಾಧ್ಯವಿದೆ. ಇನ್ನುಳಿದ ಶೇಕಡಾ 20ರಷ್ಟು ಮಂದಿ ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದು ಸುರಕ್ಷಿತವಾಗಿರಿ, ಇದರಿಂದ ಆಸ್ಪತ್ರೆಗೆ ಹೋಗುವುದು, ಐಸಿಯುಗೆ ದಾಖಲಾಗುವುದು, ಸಾವು ಸಂಭವಿಸುವುದು ತಪ್ಪುತ್ತದೆ ಎಂದರು.
ಇಂದು ಮಧ್ಯಾಹ್ನ 12.30ಕ್ಕೆ ಎಲ್ಲಾ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿದೆ. ಆರೋಗ್ಯ ಇಲಾಖೆ, ಬಿಬಿಎಂಪಿ, ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು ಸಭೆ ಸೇರಿ ಚರ್ಚಿಸಲಿದ್ದಾರೆ ಎಂದ ಸುಧಾಕರ್ ರಾಜ್ಯದಲ್ಲಿ ಲಾಕ್ ಡೌನ್ ಇನ್ನು ಮುಂದೆ ಇಲ್ಲ, ಆದರೆ ಕೊರೋನಾ ಟಫ್ ರೂಲ್ಸ್ ಹೆಚ್ಚಾಗುತ್ತದೆ. ಕಠಿಣ ನಿಯಮಗಳಿಂದಲೇ ಕೊರೋನಾ ನಿಯಂತ್ರಿಸುತ್ತೇವೆ, ಇದಕ್ಕೆ ಜನರ ಸಹಕಾರ ಬೇಕು ಎಂದರು.
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಓಮಿಕ್ರಾನ್ ಸೇರಿದಂತೆ ಕೊರೋನಾ ಇನ್ನಷ್ಟು ಹೆಚ್ಚಾಗುತ್ತದೆ. ಸರ್ಕಾರದ ಅಂದಾಜು ಮೀರಿ ಕೇಸುಗಳು ವರದಿಯಾಗುತ್ತಿದೆ. ಕೇಸ್ ಎಷ್ಟೇ ಆದರೂ ಲಾಕ್ ಡೌನ್ ಮಾಡುವುದಿಲ್ಲ. ಲಾಕ್ ಡೌನ್ ಅನ್ನುವಂತಹದ್ದು ಕಳೆದುಹೋಗಿರುವ ನೀತಿ, ನಮಗೆ ಕೊರೋನಾ ಸಾಂಕ್ರಾಮಿಕ ರೋಗದ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲದಿರುವಾಗ ತೆಗೆದುಕೊಂಡಿದ್ದ ನೀತಿ ಅದು, ಈಗ ಎರಡು ವರ್ಷದ ಅನುಭವವಿದೆ. ಒಬ್ಬರಿಗೆ ಪಾಸಿಟಿವ್ ಬಂದರೆ ಯಾವ ರೀತಿ ಚಿಕಿತ್ಸೆ ನೀಡಬಹುದು, ವ್ಯವಹರಿಸಬೇಕೆಂಬುದು ಸರ್ಕಾರಕ್ಕೆ ಗೊತ್ತಿದೆ, ಸ್ಪಷ್ಟ ಮಾಹಿತಿಯಿದೆ. ಅಲೆ ಬರುತ್ತಿದೆ, ಹೆದರಿಕೊಂಡು ಹೋಗುವುದಿಲ್ಲ, ಸಮರ್ಥವಾಗಿ ಎದುರಿಸುತ್ತೇವೆ ಎಂದರು.
0 comments:
Post a Comment