ಬಂಟ್ವಾಳ, ಜನವರಿ 15, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಾರ್ನಬೈಲು ಸಮೀಪದ ನಾಗನವಲಚ್ಚಿಲ್ ನಿವಾಸಿ, ಪಾಣೆಮಂಗಳೂರಿನ ಹಿರಿಯ ವೈದ್ಯ ಡಾ ಎಚ್ ಪಿ ಸಪಲಿಗ (82) ಇವರು ಶನಿವಾರ (ಜನವರಿ 15) ಮುಂಜಾನೆ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಪಾಣೆಮಂಗಳೂರು ಪೇಟೆಯಲ್ಲಿ ಕಳೆದ 50 ವರ್ಷಗಳಿಂದ ಸ್ವಂತ ಕ್ಲಿನಿಕ್ ನಡೆಸುತ್ತಿದ್ದ ಇವರು 1974 ರಿಂದ ಮಾರ್ನಬೈಲು ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿ ಸಂಸ್ಥಾಪಕರಾಗಿ ಕಳೆದ 28 ವರ್ಷಗಳಿಂದ ಕಟೀಲು ಮೇಳದ ಯಕ್ಷಗಾನ ಬಯಲಾಟ ನಡೆಸುತ್ತಿದ್ದರು. ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದಲ್ಲಿ 25 ವರ್ಷಗಳಿಂದ ಸ್ಥಾಪಕ ಕೋಶಾಧಿಕಾರಿಯಾಗಿ, ಸುಮಂಗಲಾ ಕ್ರೆಡಿಟ್ ಸೊಸೈಟಿ ನಿರ್ದೇಶಕರಾಗಿ, ನಂದಾವರ ಕ್ಷೇತ್ರ ಭಕ್ತ ಮಂಡಳಿ ಸದಸ್ಯರಾಗಿ, ಬಂಟ್ವಾಳ ಲಯನ್ಸ್ ಕ್ಲಬ್ ಸದಸ್ಯರಾಗಿ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಸೇವಾ ರಂಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಪುತ್ರ ಗ್ರಾಮ ಪಂಚಾಯತ್ ಸದಸ್ಯ ಸಂದೀಪ್ ಕುಮಾರ್ ಸಹಿತ ಮೂವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್, ಮಾಜಿ ಸಚಿವ ಬಿ ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ ರಘು ಸಪಲ್ಯ ಮೊದಲಾದವರು ತೀವ್ರ ಸಂತಾಪ ಸೂಚಿಸಿದ್ದಾರೆ.
0 comments:
Post a Comment