ಬೆಂಗಳೂರು, ಜನವರಿ 30, 2022 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಮುಖಂಡ ಸಿ ಎಂ ಇಬ್ರಾಹಿಂ ಅವರ ಬ್ಲ್ಯಾಕ್ ಮೇಲ್ ರಾಜಕೀಯ ತಂತ್ರಕ್ಕೆ ಪಕ್ಷದ ಹಿರಿಯ ನಾಯಕರು ಸಮಪರ್ಕವಾದ ರೀತಿಯಲ್ಲೇ ಪ್ರತಿತಂತ್ರ ಹೂಡಿದ್ದು, ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರನ್ನಾಗಿ ನೇಮಕಗೊಳಿಸಿ ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟು ತಕ್ಷಣದಿಂದಲೇ ಆದೇಶ ಹೊರಡಿಸಲಾಗಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶದ ಮೇರೆಗೆ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿ ಖಾದರ್ ಅವರನ್ನು ನೇಮಿಸಿ ಪ್ರಕಟಣೆ ಹೊರಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕರಾಗಿ ಹಾಗೂ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಅವರ ಜೊತೆ ಇನ್ನು ಮುಂದಕ್ಕೆ ಉಪ ನಾಯಕರಾಗಿ ಯು ಟಿ ಖಾದರ್ ಕಾರ್ಯನಿರ್ವಹಿಸುವ ಮೂಲಕ ಪಕ್ಷದ ಮಹತ್ವದ ಹಾಗೂ ಮುಂಚೂಣಿ ಹುದ್ದೆಯನ್ನು ನಿಭಾಯಿಸಲಿದ್ದಾರೆ.
ಹಿರಿಯ ವಲಸಿಗ ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ ಅವರು ಅಲ್ಪಸಂಖ್ಯಾತರ ಕೋಟಾದ ಹೆಸರಿನಲ್ಲಿ ಇತ್ತೀಚೆಗೆ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಕೈ ಹಾಕಿ ಪಕ್ಷದಲ್ಲಿ ಮಹತ್ವದ ಹುದ್ದೆ ಮೇಲೆ ಕಣ್ಣಿಟ್ಟು ರಾಜೀನಾಮೆ ಹಾಗೂ ಪಕ್ಷ ತೊರೆಯುವ ಮಾತನಾಡಿರುವ ಹಿನ್ನಲೆಯಲ್ಲಿ ಕೈ ನಾಯಕರು ಈ ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಶಿಫಾರಸ್ಸಿನ ಮೇರೆ ಶಾಸಕ ಯು ಟಿ ಖಾದರ್ ಅವರನ್ನು ಆಯಕಟ್ಟಿನ ಸ್ಥಾನಕ್ಕೆ ನೇಮಕಗೊಳಿಸುವಲ್ಲಿ ಸಫಲರಾಗಿದ್ದಾರೆ ಎನ್ನಲಾಗಿದ್ದು, ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಕೈಗೊಂಡಿರುವ ಈ ಕ್ರಮ ಮಹತ್ವಪೂರ್ಣವಾದುದು ಎನ್ನಲಾಗುತ್ತಿದೆ.
ಕೈ ಸಿ.ಎಲ್.ಪಿ. ಉಪನಾಯಕದಂತಹ ಅತ್ಯುನ್ನತ ಹುದ್ದೆ ದಕ್ಕಿಸಿಕೊಂಡ ಕರಾವಳಿಯ ಏಕೈಕ ಕಾಂಗ್ರೆಸ್ ಶಾಸಕ ಹಾಗೂ ಅಲ್ಪಸಂಖ್ಯಾತ ನಾಯಕ ಯು ಟಿ ಖಾದರ್ ಅವರನ್ನು ಮಾಜಿ ಸಚಿವ ಬಿ ರಮಾನಾಥ ರೈ ಅಭಿನಂದಿಸಿದ್ದು, ಉಜ್ವಲ ಭವಿಷ್ಯವನ್ನು ಹಾರೈಸಿದ್ದಾರೆ.
0 comments:
Post a Comment