ಬಂಟ್ವಾಳ, ಜನವರಿ 07, 2022 (ಕರಾವಳಿ ಟೈಮ್ಸ್) : ದೇಶ ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್ ನಾಯಕರು ಎಂಬುದು ಜಗತ್ತಿಗೇ ತಿಳಿದಿರುವ ಹಗಲು ಸತ್ಯ. ಅದೂ ಅಲ್ಲದೆ ದೇಶದ ಜನ ಅನುಭವಿಸುತ್ತಿರುವ ಪ್ರತಿಯೊಂದು ಜನಪರ ಯೋಜನೆಗಳೂ ಕೂಡಾ ಈ ದೇಶಕ್ಕೆ ಕೊಡುಗೆಯಾಗಿ ನೀಡಿರುವುದು ಕಾಂಗ್ರೆಸ್ ಸರಕಾರಗಳು. ದೇಶ ಸ್ಮರಿಸುತ್ತಿರುವ ಸಕಲ ನಾಯಕರೂ ಕೂಡಾ ಕಾಂಗ್ರೆಸ್ ಪಕ್ಷದಿಂದಲೇ ಈ ದೇಶಕ್ಕಾಗಿ ಕೊಡುಗೆ ನೀಡಿ ಹುತಾತ್ಮರಾದವರಾಗಿರುತ್ತಾರೆ. ಇದೆಲ್ಲವನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ಹೀಗಿರುತ್ತಾ ಕಾಂಗ್ರೆಸ್ ನೀಡಿರುವ ಸಕಲ ಅನುಗ್ರಹಗಳ ಫಲ ಉಣ್ಣುತ್ತಿರುವ ಬಿಜೆಪಿಯ ಪ್ರಧಾನಿ ಸಹಿತ ಎಲ್ಲ ಬಿಜೆಪಿಗರು ಕೇಳುತ್ತಿರುವ ಕಾಂಗ್ರೆಸ್ ಏನು ಮಾಡಿದೆ ಎಂಬ ಪ್ರಶ್ನೆಗೆ ಯಾವುದೇ ಕಾರಣಕ್ಕೂ ಉತ್ತರಿಸುವ ಸಲುವಾಗಿ ಕಾಂಗ್ರೆಸ್ ಕಾರ್ಯಕರ್ತರು ಸಮಯ ವ್ಯರ್ಥ ಮಾಡದೆ ಈ ದೇಶದ ಜನತೆಗೆ ಕಾಂಗ್ರೆಸ್ ಪಕ್ಷದ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟು ಮತ್ತೊಮ್ಮೆ ದೇಶದಲ್ಲಿ ಕಾಂಗ್ರೆಸ್ ಸುವರ್ಣಯುವ ಆರಂಭಗೊಳ್ಳಲು ಶಕ್ತಿ ಮೀರಿ ಶ್ರಮಿಸಿ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಹಾಗೂ ವಯನಾಡ್-ಕಲ್ಪೆಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಅಡ್ವಕೇಟ್ ಟಿ ಸಿದ್ದೀಕ್ ಕರೆ ನೀಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಸಂಜೆ (ಜ 7) ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ನಡೆದ ಅಲ್ಪಸಂಖ್ಯಾತರ ಸಮಾವೇಶ ಹಾಗೂ ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷರುಗಳ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಭಾಷಣಗೈದ ಅವರು ಕಾಂಗ್ರೆಸ್ ಈ ದೇಶದ ಸಂರಕ್ಷಕ ಪಕ್ಷವಾಗಿದೆ. ಇದರಲ್ಲಿ ಸಂಶಯವಿಲ್ಲ. ಆದರೆ ದೇಶಕ್ಕಾಗಿ ಏನೂ ಮಾಡದ ಬಿಜೆಪಿಗರು ಇಂದು ದೇಶಭಕ್ತರೆಂದು ಡಂಗುರ ಸಾರುತ್ತಿರುವುದು ಈ ದೇಶದ ಜನ ಕೇಳಬೇಕಾಗಿ ಬಂದಿರುವ ದೊಡ್ಡ ವ್ಯಂಗ್ಯ ಎಂದವರು ಕುಹಕವಾಡಿದರು.
ದೇಶಕ್ಕಾಗಿ ದುಡಿದು ದೇಶದ ಮೊದಲ ಭಯೋತ್ಪಾದಕ ನಾಥೂರಾಂ ಗೋಡ್ಸೆಯ ಗುಂಡಿಗೆ ಎದೆಯೊಡ್ಡಿ ‘ಹೇ ರಾಂ’ ಎಂದು ಈ ಮಣ್ಣಿನಲ್ಲಿ ಹುತಾತ್ಮರಾದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಜಪಿಸಿದ ರಾಮ ದೇಶದ ಸಮಸ್ತ ಹಿಂದೂಗಳ ಭಗವಂತನಾಗಿದ್ದಾನೆಯೇ ಹೊರತು ಬಿಜೆಪಿ-ಆರೆಸ್ಸೆಸ್ಸಿಗರು ಜನರನ್ನು ಜಾತಿ-ಮತದ ಆಧಾರದಲ್ಲಿ ವಿಭಜಿಸಿ ಆಕ್ರಮಣಕ್ಕಾಗಿ ಜಪಿಸುವ ಶ್ರೀರಾಮ ಕೇವಲ ಬಾಯಿಚಪಲವಾಗಿದೆ ಎಂದು ಝಾಡಿಸಿದ ಸಿದ್ದೀಕ್ ಈ ದೇಶದ ಹಿಂದೂಗಳು ದೇಶಪ್ರೇಮಿಗಳು ಆದರೆ ಹಿಂದುತ್ವವಾದಿ ಶಕ್ತಿಗಳು ದೇಶದ್ರೋಹಿಗಳು. ಗಾಂಧಿ ಪವಿತ್ರ ಹಿಂದು, ಆದರೆ ಗೋಡ್ಸೆ ಆಕ್ರಮಣಕಾರಿ-ವಿನಾಶಕಾರಿ ಹಿಂದುತ್ವದ ಪ್ರತೀಕ ಎಂದು ಪ್ರತಿಪಾದಿಸಿದರು.
ಸಾಹೋದರ್ಯದ ಮತವಾಗಿರುವ ಹಿಂದೂ ಧರ್ಮವನ್ನು ಆಕ್ರಮಣದ ಮತವಾಗಿ ಪರಿವರ್ತಿಸುತ್ತಿರುವ ಬಿಜೆಪಿ ಈ ದೇಶದ ದೊಡ್ಡ ಶತ್ರು ಎಂದ ಶಾಸಕ ಸಿದ್ದೀಕ್ ಇಸ್ಲಾಮಿನ ಪ್ರವಾದಿಗಳು ತನ್ನ ಜೀವನದ ಕೊನೆಯ ಭಾಷಣದಲ್ಲಿ ಜನರನ್ನು ಓ ಮಾನವ ಸಮುದಾಯವೇ ಎಂದು ಸಂಬೋಧಿಸಿದ್ದರೇ ಹೊರತು ಓ ಮುಸ್ಲಿಮರೇ ಎಂದು ಸಂಬೋದಿಸಿಲ್ಲ ಎಂಬುದೇ ಇಸ್ಲಾಮಿನ ಮಾನವ ಬಂಧುತ್ವಕ್ಕೆ ಸಾಕ್ಷಿ ಎಂದರು.
ಆರೆಸ್ಸೆಸ್-ಬಿಜೆಪಿಯ ಮಿತ್ರ ಸಂಘಟನೆಯಾಗಿ ಎಸ್‍ಡಿಪಿಐ. ಎರಡೂ ಸಂಘಟನೆಗಳು ಮಾನವ ವಿರೋಧಿಯಾಗಿದ್ದು, ಎರಡೂ ಮತೀಯವಾದವನ್ನೂ ಕಾಂಗ್ರೆಸ್ಸಿಗರು ಸಮಾನವಾಗಿ ವಿರೋಧಿಸುತ್ತಾರೆ ಎಂದ ಅವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವವನ್ನು, ಮತೀಯವಾದವನ್ನು ಬಲವಾಗಿ ವಿರೋಧಿಸುತ್ತಿರುವ ಬಿ ರಮಾನಾಥ ರೈ ಅವರಂತಹ ನಾಯಕರು ಕಾಂಗ್ರೆಸ್ ಪಕ್ಷದ ಬೆನ್ನುಲುಬು-ಆಸ್ತಿಯಾಗಿದ್ದಾರೆ ಎಂದರು.
ಮಾಜಿ ಸಚಿವ ಬಿ ರಮಾನಾಥ ರೈ ಸಮಾವೇಶ ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಕೆ ಕೆ ಶಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಸದಸ್ಯ ಐವನ್ ಡಿ’ಸೋಜ, ಎಐಸಿಸಿ ಕಾರ್ಯದರ್ಶಿ ಪಿ ವಿ ಮೋಹನ್, ನಿವೃತ್ತ ಪೊಲೀಸ್ ಅಧಿಕಾರಿ ಜಿ ಎ ಬಾವಾ, ಜಿ ಪಂ ಮಾಜಿ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ ಎಸ್ ಮುಹಮ್ಮದ್, ಬಿ ಪದ್ಮಶೇಖರ ಜೈನ್, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ರಾಜ್ಯ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ರಾಜ್ಯ ಅಲ್ಪಸಂಖ್ಯಾತಘಟಕದ ಸಂಯೋಜಕರಾದ ಮುಹಮ್ಮದ್ ನಂದರಬೆಟ್ಟು, ಆಲ್ಬರ್ಟ್ ಮಿನೇಜಸ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೋ, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಸಹಕಾರಿ ಸಂಘ ಒಕ್ಕೂಟದ ಜಿಲ್ಲಾಧ್ಯಕ್ಷ ಸುದರ್ಶನ್ ಜೈನ್, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ, ಉದ್ಯಮಿಗಳಾದ ಹಾಜಿ ಪಿ ಎಸ್ ಅಬ್ದುಲ್ ಹಮೀದ್, ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಇಸ್ಮಾಯಿಲ್ ಸಿದ್ದೀಕ್ ಕಾವಳಕಟ್ಟೆ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನವಾಝ್ ಬಡಕಬೈಲು, ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರಾ, ಬಂಟ್ವಾಳ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಮುಹಮ್ಮದ್ ಸಂಗಬೆಟ್ಟು ಮೊದಲಾದವರು ಭಾಗವಹಿಸಿದ್ದರು.
ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನಿಯೋಜಿತ ಅಧ್ಯಕ್ಷರುಗಳಾದ ಅರ್ಶದ್ ಸರವು, ಕೆ ಮುಹಮ್ಮದ್ ಶರೀಫ್ ಅವರು ಗಣ್ಯರ ಸಮುಖದಲ್ಲಿ ಅಧಿಕಾರ ಹಾಗೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಪಾಣೆಮಂಗಳೂರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಬೇಬಿ ಕುಂದರ್ ಅವರು ನಿಯೋಜಿತ ಅಧ್ಯಕ್ಷರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ವೇಳೆ ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಸದಸ್ಯರನ್ನು ಅಭಿನಂದಿಸಲಾಯಿತು. ಪಕ್ಷದ ವಿವಿಧ ಘಟಕದಲ್ಲಿ ಜವಾಬ್ದಾರಿ ಹಂಚಿದವರಿಗೆ ನೇಮಕ ಪ್ರಮಾಣ ಪತ್ರ ವಿತರಿಸಲಾಯಿತು.
ಜಿ ಪಂ ಮಾಜಿ ಸದಸ್ಯ ಎಂ ಎಸ್ ಮುಹಮ್ಮದ್ ಸ್ವಾಗತಿಸಿ, ಕೆಪಿಸಿಸಿ ಕಾನೂನು, ಮಾನವ ಹಕ್ಕು ಹಾಗೂ ಆರ್ ಟಿ ಐ ಘಟಕದ ಕಾರ್ಯದರ್ಶಿ ರಿಯಾಝ್ ಹುಸೈನ್ ಬಂಟ್ವಾಳ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment