ನವದೆಹಲಿ, ಜನವರಿ 08, 2022 (ಕರಾವಳಿ ಟೈಮ್ಸ್) : ಕೇಂದ್ರ ಚುನಾವಣಾ ಆಯೋಗವು ಮುಂಬರುವ ಐದು ರಾಜ್ಯಗಳ ಚುನಾವಣೆಗೆ ದಿನಾಂಕ ಪ್ರಕಟಿಸಿದ್ದು, ಕೋವಿಡ್-19 ಶಿಷ್ಟಾಚಾರಗಳನ್ನು ಪಾಲಿಸಿ ಚುನಾವಣೆ ನಡೆಸುವುದಾಗಿ ಘೋಷಿಸಿದೆ.
ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ ಹಾಗೂ ಮಣಿಪುರ ರಾಜ್ಯಗಳ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಈ ವರ್ಷ ನಡೆಯಲಿದ್ದು ಕೋವಿಡ್-19 ನಿಯಮಗಳ ಪಾಲನೆಯೊಂದಿಗೆ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕೋವಿಡ್-19 ಸುರಕ್ಷತಾ ಕ್ರಮಗಳ ಕಾರಣಕ್ಕಾಗಿ ಈ ಬಾರಿ ಮತದಾನದ ಅವಧಿಯನ್ನು 1 ಗಂಟೆ ಹೆಚ್ಚಿಸಿ ಆಯೋಗ ಸುತ್ತೋಲೆ ಹೊರಡಿಸಿದೆ. ರಾಜಕೀಯ ಪಕ್ಷಗಳು ಹೆಚ್ಚು ವರ್ಚ್ಯುಯಲ್ ರ್ಯಾಲಿಗಳತ್ತ ಗಮನ ಹರಿಸಬೇಕೆಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚುನಾವಣೆ ಎದುರಿಸಲಿರುವ 5 ರಾಜ್ಯಗಳಲ್ಲಿ ಜನವರಿ 8 ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.
ಫೆಬ್ರವರಿ 10 ರಿಂದ ಮತದಾನ ಪ್ರಾರಂಭವಾಗಿ ಮಾರ್ಚ್ 7ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದ್ದು ಮಾರ್ಚ್ 10 ರಂದು ಫಲಿತಾಂಶ ಘೋಷಣೆಯಾಗಲಿದೆ.
ಉತ್ತರ ಪ್ರದೇಶದಲ್ಲಿ 7 ಹಂತಗಳ ಮತದಾನ ನಡೆಯಲಿದ್ದು, ಫೆ. 10 ರಂದು ಮೊದಲ ಹಂತದ ಚುನಾವಣೆ, ಫೆ. 14 ರಂದು ದ್ವಿತೀಯ ಹಂತ, ಫೆ. 20 ರಂದು ತೃತೀಯ ಹಂತ, ಫೆ. 23 ರಂದು 4ನೇ ಹಂತ, ಫೆ. 27 ರಂದು 5ನೇ ಹಂತ, ಮಾ. 3 ರಂದು 6ನೇ ಹಂತ ಹಾಗೂ ಮಾ. 7 ರಂದು 7ನೇ ಹಂತದ ಮತದಾನ ನಡೆಯಲಿದೆ. ಉಳಿದಂತೆ ಪಂಜಾಬ್, ಗೋವಾ, ಉತ್ತರಾಖಂಡ್ ರಾಜ್ಯಗಳಲ್ಲಿ ಫೆ. 14 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದರೆ, ಮಣಿಪುರದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಫೆ. 27 ರಂದು ಮೊದಲ ಹಂತ ಹಾಗೂ ಮಾ 3 ರಂದು 2ನೇ ಹಂತದ ಮತದಾನ ನಡೆಯಲಿದೆ. ಮಾ. 10ರಂದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
0 comments:
Post a Comment