ಬೆಂಗಳೂರು, ಜನವರಿ 25, 2022 (ಕರಾವಳಿ ಟೈಮ್ಸ್) : ಈ ಬಾರಿಯ ಅಂದರೆ 2021-22ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಮಂಗಳವಾರ ಪ್ರಕಟಿಸಿದೆ. ಅಂತಿಮ ವೇಳಾಪಟ್ಟಿ ಪ್ರಕಾರ ಮಾರ್ಚ್ 28 ರಿಂದ ಎಪ್ರಿಲ್ 11ರವರೆಗೆ ಪರೀಕ್ಷೆಗಳು ನಡೆಯಲಿವೆ.
ಕಳೆದ ವಾರ ಎಸ್ಸೆಸ್ಸೆಲ್ಸಿ ಬೋರ್ಡ್ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿತ್ತು. ಮಾರ್ಚ್ 28 ರಿಂದ ಎಪ್ರಿಲ್ 11 ರವರೆಗೆ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿತ್ತು. ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದ ಹಿನ್ನಲೆಯಲ್ಲಿ ಅದೇ ವೇಳಾಪಟ್ಟಿಯನ್ನು ಪರೀಕ್ಷಾ ಮಂಡಳಿ ಅಂತಿಮಗೊಳಿಸಿದ್ದು, ಮಂಗಳವಾರ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಮಾರ್ಚ್ 28ರಂದು ಪ್ರಥಮ ಭಾಷೆ, ಮಾರ್ಚ್ 30ರಂದು ದ್ವಿತೀಯ ಭಾಷೆ, ಎಪ್ರಿಲ್ 1 ರಂದು ಅರ್ಥಶಾಸ್ತ್ರ, ಕೋರ್ ಸಬ್ಜೆಕ್ಟ್, ಎಪ್ರಿಲ್ 4 ಗಣಿತ, ಸಮಾಜಶಾಸ್ತ್ರ, ಎಪ್ರಿಲ್ 6 ರಂದು ಸಮಾಜ ವಿಜ್ಞಾನ, ಎಪ್ರಿಲ್ 8 ರಂದು ತೃತೀಯ ಭಾಷೆ, ಎಪ್ರಿಲ್ 11 ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ ವಿಷಯಗಳ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷಾ ಸಮಯ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45. ಪ್ರತಿ ವಿಷಯಕ್ಕೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷ ಕಾಲಾವಕಾಶ ನೀಡಲಾಗಿದೆ.
ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗಳು ಫೆಬ್ರವರಿ 21 ರಿಂದ 26 ರವರೆಗೆ ನಡೆಯಲಿದ್ದು, ಬೆಳಿಗ್ಗೆ 1.30 ರಿಂದ ಮಧ್ಯಾಹ್ನ 1.45ರ ವರಗೆ ಪರೀಕ್ಷೆಗಳು ನಡೆಯಲಿವೆ.
0 comments:
Post a Comment