ಬೆಂಗಳೂರು, ಡಿಸೆಂಬರ್ 31, 2021 (ಕರಾವಳಿ ಟೈಮ್ಸ್) : ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಇಂದಿನ (ಡಿ 31) ಕರ್ನಾಟಕ ಬಂದ್ ವಾಪಸ್ ಪಡೆಯಲಾಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಬಂದ್ ಕೈಬಿಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಮುಖಂಡರು ಬಂದ್ ಆಚರಣೆಯನ್ನು ಹಿಂಪಡೆದಿದ್ದು, ಮತ್ತೊಂದು ದಿನಾಂಕ ನಿಗದಿಪಡಿಸುವುದಾಗಿ ಘೋಷಿಸಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಬಂದ್ ವಾಪಸ್ ಪಡೆಯಲು ವಾಟಾಳ್ ನಾಗರಾಜ್ ಮತ್ತು ಸಾ. ರಾ. ಗೋವಿಂದ್ ಸ್ಪಂದಿಸಿದ್ದು, ಅವರಿಗೆ ಧನ್ಯವಾದಗಳು ಎಂದರು. ವಾ
ವಾಟಾಳ್ ನಾಗರಾಜ್ ಮಾತನಾಡಿ, ಸಿಎಂ ಮನವಿ ಮೇರೆಗೆ ನಾವೆಲ್ಲಾ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಹೊಸ ವರ್ಷಕ್ಕೆ ತೊಂದರೆಯಾಗಲಿದೆ. ಅದು ಸರಿಯಿಲ್ಲ ಎಂಬುದಾಗಿ ನಿರ್ಧಾರ ತೆಗೆದುಕೊಂಡಿದ್ದು, ಇಂದಿನ ಬಂದ್ ಮುಂದೂಡಲಾಗಿದೆ ಎಂದು ತಿಳಿಸಿದರು. ಮುಂದಿನ ಬಂದ್ ದಿನಾಂಕ ಕುರಿತು ಎರಡು ಮೂರು ದಿನಗಳಲ್ಲಿ ಸಭೆ ಕರೆದು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
0 comments:
Post a Comment