ಬಂಟ್ವಾಳ, ನವೆಂಬರ್ 20, 2021 (ಕರಾವಳಿ ಟೈಮ್ಸ್) : ತಾಲೂಕಿನ ಮೆಲ್ಕಾರ್ ಜಂಕ್ಷನ್ನಿನಲ್ಲಿ ಶುಕ್ರವಾರ ತಡರಾತ್ರಿ ವೇಳೆ ಯುವಕರ ಎರಡು ಗುಂಪುಗಳು ಹೆದ್ದಾರಿ ಬದಿಯಲ್ಲೆ ಆಯುಧಗಳೊಂದಿಗೆ ಸಾರ್ವಜನಿಕವಾಗಿ ಬಡಿದಾಡಿಕೊಂಡಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರಾತ್ರಿ ಸುಮಾರು 10 ಗಂಟೆಯ ಬಳಿಕ ಮೆಲ್ಕಾರ್ ಜಂಕ್ಷನ್ನಿನ ಸರಾ ಆರ್ಕೆಡ್ ಬಳಿ ವಾಹನಗಳಲ್ಲಿ ಬಂದ ಯುವಕರ ಎರಡು ಗುಂಪುಗಳು ಸಾರ್ವಜನಿಕವಾಗಿ ಹೆದ್ದಾರಿ ಬದಿಯಲ್ಲೇ ಹೊಡೆದಾಡಿಕೊಂಡಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಮಧ್ಯರಾತ್ರಿಯೇ ವೈರಲ್ ಆಗಿದೆ.
ಪಾಣೆಮಂಗಳೂರು ವೆಂಕಟರಮಣ ದೇವಸ್ಥಾನದ ಲಕ್ಷದೀಪ ಕಾರ್ಯಕ್ರಮದ ಬಂದೊಬಸ್ತಿನಲ್ಲಿದ್ದ ಬಂಟ್ವಾಳ ನಗರ ಠಾಣಾ ಕ್ರೈಂ ಎಸ್ಸೈ ಕಲೈಮಾರ್ ಅವರು ಹೆದ್ದಾರಿ ಬದಿಯಲ್ಲಿ ಯುವಕರ ತಂಡ ಹೊಡೆದಾಟ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದ ತಕ್ಷಣ ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭ ಮೆಲ್ಕಾರ್ ಸಾರಾ ಆರ್ಕೆಡ್ ಮುಂಭಾಗ ತಲುಪಿದಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು 9-10 ಮಂದಿ ಅಪರಿಚಿತ ವ್ಯಕ್ತಿಗಳು ಗುಂಪು ಸೇರಿಕೊಂಡು ಒಬ್ಬರಿಗೊಬ್ಬರು ಕೈಗಳಿಂದ ಹೊಡೆದಾಟ ಹಾಗೂ ದೂಡಾಟ ಮತ್ತು ದೊಣ್ಣೆಗಳನ್ನು ಬೀಸಿಕೊಂಡು ಕಲಹ ನಡೆಸಿ ಉರುಳಾಟ ಮಾಡುತ್ತಿರುವುದು ಕಂಡು ಬಂದಿದೆ. ಪೊಲೀಸರ ವಾಹನವನ್ನು ದೂರದಲ್ಲೇ ನೋಡಿದ ತಂಡ ಸ್ಥಳದಿಂದ ಪರಾರಿಯಾಗಿದೆ.
ಈ ಬಗ್ಗೆ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ 134/2021 ರಂತೆ ಕಲಂ 160, 143, 147, 148, 149 ಐಪಿಸಿಯಂತೆ ಅಪರಿಚಿತ ಯುವಕರ ವಿರುದ್ದ ಪ್ರಕರಣ ದಾಖಲಾಗಿದೆ.
0 comments:
Post a Comment