ಬಂಟ್ವಾಳ, ನವೆಂಬರ್ 04, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ, ಬಿ ಸಿ ರೋಡು ಸಮೀಪದ ಪಲ್ಲಮಜಲು ನಿವಾಸಿ ಜಿ ಸದಾನಂದ ಮಲ್ಲಿ (82) ಅವರು ಬುಧವಾರ (ನವೆಂಬರ್ 3) ರಾತ್ರಿ ಪಲ್ಲಮಜಲಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದ ಮಲ್ಲಿ ಅವರು ಬಿ ಸಿ ರೋಡು ಶ್ರೀ ಚಂಡಿಕಾ ಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಕಾಂಗ್ರೆಸ್ಸಿನ ಸಕ್ರಿಯ ನಾಯಕರಾಗಿದ್ದ ಇವರು ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಗೋಳ್ತಮಜಲು ಕ್ಷೇತ್ರದಿಂದ ಮತ್ತೆ ಜಿ ಪಂ ಸದಸ್ಯತ್ವಕ್ಕಾಗಿ ಸ್ಪರ್ಧಿಸಿದ್ದರು. ಆದರೆ ತುಂಬೆ ಪ್ರಕಾಶ್ ಶೆಟ್ಟಿ ವಿರುದ್ದ ಸೋಲು ಕಂಡಿದ್ದು, ಬಳಿಕ ಸಕ್ರಿಯ ರಾಜಕೀಯದಿಂದ ದೂರವಿದ್ದು ಕೌಟುಂಬಿಕ ಜೀವನ ನಡೆಸುತ್ತಿದ್ದರು.
ಇವರ ಪತ್ನಿ ಸ್ವರ್ಣಲತಾ ಮಲ್ಲಿ ಕೂಡ ಪುರಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಇವರ ಪುತ್ರ ರಾಕೇಶ್ ಮಲ್ಲಿ ಅವರು ಪ್ರಸ್ತುತ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೃತರು ಪತ್ನಿ, ಪುತ್ರ, ಪುತ್ರಿ ರಶ್ಮಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment