ಶಾರ್ಜಾ, ನವೆಂಬರ್ 01, 2021 (ಕರಾವಳಿ ಟೈಮ್ಸ್) : ಇಲ್ಲಿನ ಮೈದಾನದಲ್ಲಿ ಸೋಮವಾರ ರಾತ್ರಿ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 26 ರನ್ ಗಳಿಂದ ಮಣಿಸಿದ ಇಂಗ್ಲಂಡ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶ ಖಚಿತಪಡಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲಂಡ್ ಜೋಸ್ ಬಟ್ಲರ್ (101) ಅವರ ಆಕರ್ಷಕ ಶತಕ ಹಾಗೂ ನಾಯಕ ಇಯಾನ್ ಮಾರ್ಗನ್ (40) ಅವರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 163 ರನ್ ಕಲೆ ಹಾಕಿತು. 1
164 ರನ್ ಗುರಿ ಪಡೆದ ಶ್ರೀಲಂಕಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಪಥುಮ್ ನಿಸಾಂಕ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರೆ ಕುಸಾಲ್ ಪರೇರಾ 7 ರನ್ ಸಿಡಿಸಿ ಔಟಾದರು. ಚಾರಿತ್ ಅಸಲಂಕಾ 21 ರನ್ ಭಾರಿಸಿದರು. ಭಾನುಕ ರಾಜಪಕ್ಸೆ 26 ರನ್ ಗಳಿಗೆ ಇನ್ನಿಂಗ್ಸ್ ಕೊನೆಗೊಸಿದರು. ನಾಯಕ ದಸೂನ್ ಶನಕ (26) ಹಾಗೂ ವಾವಿಂಡು ಹಸರಂಗ (34) ಕೊಂಚ ಹೋರಾಟ ಸಂಘಟಿಸಿದರೂ ಗೆಲುವಿಗೆ ಅದು ಸಾಕಾಗಲಿಲ್ಲ. ಲಂಕಾ ಗೆಲುವಿಗೆ ಅಂತಿಮ 24 ಎಸೆತದಲ್ಲಿ 41 ರನ್ ಅವಶ್ಯಕತೆ ಇತ್ತು. ಅಷ್ಟರಲ್ಲೇ ಶ್ರೀಲಂಕಾ ಸೋಲಿನ ಹಾದಿಯಲ್ಲಿ ಸಾಗಿತು. ಲಂಕಾ ಗೆಲುವಿಗೆ ಅಂತಿಮ 12 ಎಸೆತದಲ್ಲಿ 30 ರನ್ ಬೇಕಿತ್ತು. ಆದರೆ ಅಂತಿಮವಾಗಿ ಲಂಕಾ 19 ಓವರ್‌ಗಳಲ್ಲಿ 137 ರನ್ ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಇಂಗ್ಲೆಂಡ್ ತಂಡ 26 ರನ್ ಗೆಲುವು ದಾಖಲಿಸಿತು.
ಸತತ 4 ಗೆಲುವು ದಾಖಲಿಸಿದ ಇಂಗ್ಲೆಂಡ್ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಗೆಲುವಿನೊಂದಿಗ ನಾಯಕ ಇಯಾನ್ ಮಾರ್ಗನ್ ಟಿ-20ಯಲ್ಲಿ ಅತೀ ಹೆಚ್ಚು ಗೆಲುವು ಸಾಧಿಸಿದ ನಾಯಕ ಅನ್ನೋ ದಾಖಲೆ ಬರೆದರು.
ಟಿ-20ಯಲ್ಲಿ ಗರಿಷ್ಠ ಗೆಲುವು ದಾಖಲಿಸಿದ ನಾಯಕ ಇಯಾನ್ ಮಾರ್ಗನ್ 43 (68 ಪಂದ್ಯ), ಅಸ್ಗರ್ ಅಫ್ಘಾನ್ 42 (52 ಪಂದ್ಯ), ಎಂ.ಎಸ್. ಧೋನಿ 42 (72 ಪಂದ್ಯ), ಸರ್ಫರಾಜ್ ಅಹಮ್ಮದ್ 29 (37 ಪಂದ್ಯ) ಹಾಗೂ ವಿರಾಟ್ ಕೊಹ್ಲಿ 29 (47 ಪಂದ್ಯ) ಪಟ್ಟಿಯಲ್ಲಿ ಸ್ಥಾನ ಪಡೆದರು.
ಶ್ರೀಲಂಕಾ ವಿರುದ್ಧದ ಗೆಲುವಿನ ಬಳಿಕ ಇಂಗ್ಲೆಂಡ್ ತಂಡ 8 ಅಂಕ ಸಂಪಾದಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಸತತ 4 ಗೆಲುವಿನ ಮೂಲಕ ಇಂಗ್ಲೆಂಡ್ ತಂಡದ ಸೆಮಿಫೈನಲ್ ಕನಸು ಕೈಗೂಡಿದೆ. ಶ್ರೀಲಂಕಾ ಮತ್ತೊಂದು ಸೋಲಿಗೆ ಗುರಿಯಾಯಿತು. ಈ ಮೂಲಕ ಶ್ರೀಲಂಕಾ ಆಡಿದ 4 ಪಂದ್ಯದಲ್ಲಿ ಕೇವಲ 1 ಗೆಲುವು ಸಾಧಿಸಿದೆ.
0 comments:
Post a Comment