ಬಂಟ್ವಾಳ, ನವೆಂಬರ್ 23, 2021 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ವಿವೇಕಾನಂದ ಹಾಗೂ ಪಿಎಸ್ಸೈ ಅವಿನಾಶ್ ಅವರ ನೇತೃತ್ವದ ಪೊಲೀಸರು ಪ್ರಸ್ತುತ ವರ್ಷದಲ್ಲಿ ಒಟ್ಟು 12 ಪ್ರಕರಣಗಳನ್ನು ಭೇಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸೊತ್ತುಗಳನ್ನು ನ್ಯಾಯಾಲಯದ ಅನುಮತಿ ಪಡೆದುಕೊಂಡು ಸೋಮವಾರ ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ.
2021ನೇ ವರ್ಷದಲ್ಲಿ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ಸುಲಿಗೆ, ವಂಚನೆ ಸೇರಿದಂತೆ ಒಟ್ಟು 12 ಪ್ರಕರಣಗಳನ್ನು ಬೇಧಿಸಿ ಒಟ್ಟು 17.33 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದುಕೊಂಡು ಬಂಟ್ವಾಳ ಎಎಸ್ಪಿ ಶಿವಾಂಷು ರಜಪೂತ್ ಅವರು ಸೋಮವಾರ ಸೊತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
11,3400/- ರೂಪಾಯಿ ಮೌಲ್ಯದ 252.390 ಗ್ರಾಂ ತೂಕದ ಚಿನ್ನಾಭರಣಗಳು, 5,49,00/- ರೂಪಾಯಿ ಮೌಲ್ಯದ ಬೋಲೇರೊ ಜೀಪ್, ಆಲ್ಟೋ ಕಾರು, ಮೋಟಾರ್ ಸೈಕಲ್, 50,000/- ರೂಪಾಯಿ ಮೌಲ್ಯದ ಲ್ಯಾಪ್ ಟಾಪ್‍ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡು ಪ್ರಕರಣಗಳನ್ನು ಭೇಧಿಸುವಲ್ಲಿ ಯಶಸ್ವಿಯಾಗಿದ್ದರು.
ಜಿಲ್ಲಾ ಎಸ್ಪಿ ಋಷಿಕೇಷ್ ಭಗವಾನ್ ಸೋನಾವಣೆ ಅವರ ನಿರ್ದೇಶನದಂತೆ ಅಡಿಶನಲ್ ಎಸ್ಪಿ ಡಾ ಶಿವಕುಮಾರ್ ಗುಣಾರೆ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಎಎಸ್ಪಿ ಶಿವಾಂಷು ರಜಪೂತ್ ಅವರ ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ವಿವೇಕಾನಂದ ಹಾಗೂ ಬಂಟ್ವಾಳ ನಗರ ಠಾಣಾ ಎಸ್ಸೈ ಅವಿನಾಶ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment