ಅಬುಧಾಬಿ, ನವೆಂಬರ್ 03, 2021 (ಕರಾವಳಿ ಟೈಮ್ಸ್) : ಅಬುಧಾಬಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಟಿ-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶ ತಂಡವನ್ನು ಸುಲಭವಾಗಿ 6 ವಿಕೆಟ್‍ಗಳಿಂದ ಸೋಲಿಸಿ ಸೆಮೀಸ್ ರೇಸ್ ನಲ್ಲಿದ್ದರೆ, ಸತತ 4ನೇ ಸೋಲು ಕಾಣುವ ಮೂಲಕ ಬಾಂಗ್ಲಾದೇಶ ಟೂರ್ನಿಯಿಂದ ನಿರ್ಗಮಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗಿಗಿಳಿದ ಬಾಂಗ್ಲಾದೇಶ ತಂಡ ಕೇವಲ 84 ರನ್‍ಗಳ ಸಾಧಾರಣ ಮೊತ್ತಕ್ಕೆ ಇನ್ನಿಂಗ್ಸ್ ಮುಗಿಸಿತು. ದಕ್ಷಿಣ ಆಫ್ರಿಕಾ ತಂಡದ ವೇಗಿಗಳಾದ ಕಗಿಸೋ ರಬಾಡ ಹಾಗೂ ಏನ್ರಿಚ್ ನೊಕಿಯೆ ಅವರ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾ ಕನಿಷ್ಠ ಮೊತ್ತಕ್ಕೆ ಕುಸಿಯಿತು. ಕಗಿಸೋ ರಬಾಡ ಹಾಗೂ ಏನ್ರಿಚ್ ನೊಕಿಯೆ ತಲಾ 3 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶ ಕುಸಿತಕ್ಕೆ ಕಾರಣರಾದರು. ಲಿಟನ್ ದಾಸ್, ಶಮೀಮ್ ಹೊಸೈನ್ ಹಾಗೂ ಮೆಹದಿ ಹಸನ್ ಎರಡಂಕಿ ದಾಖಲಿಸಿದ್ದು ಬಿಟ್ಟರೆ ಉಳಿದ ಬಾಂಗ್ಲಾ ಆಟಗಾರರು ಆಫ್ರಿಕಾ ದಾಳಿಗಾರರಿಗೆ ನಿರುತ್ತರರಾದರು.
ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಮೊದಲ ಓವರ್‍ನಲ್ಲೇ ರೀಜಾ ಹೆಂಡ್ರಿಕ್ಸ್ ವಿಕೆಟ್ ಕಳೆದುಕೊಂಡಿತು. ಹೆಂಡ್ರಿಕ್ಸ್ ಕೇವಲ 4 ರನ್ ಬಾರಿಸಿ ಟಸ್ಕಿನ್ ಅಹಮ್ಮದ್‍ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ 15 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 16 ರನ್ ಬಾರಿಸಿ ಮೆಹದಿ ಹಸನ್‍ಗೆ ಕ್ಲೀನ್ ಬೌಲ್ಡ್ ಆದರು. ಏಯ್ಡನ್ ಮಾರ್ಕ್‍ರಮ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ರಾಸ್ಸಿ ವ್ಯಾನ್ ಡರ್ ಡುಸೇನ್ ಹಾಗೂ ತೆಂಬಾ ಬವುಮಾ ಜೋಡಿ 4 ವಿಕೆಟ್‍ಗೆ 37 ರನ್‍ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವ್ಯಾನ್ ಡರ್ ಡುಸೇನ್ 22 ರನ್ ಬಾರಿಸಿ ನಸುಮ್ ಅಹಮ್ಮದ್‍ಗೆ ವಿಕೆಟ್ ಒಪ್ಪಿಸಿದರು. ನಾಯಕ ತೆಂಬಾ ಬವುಮಾ 28 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 31 ರನ್ ಬಾರಿಸುವ ಮೂಲಕ ಇನ್ನೂ 39 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ದಕ್ಷಿಣ ಆಫ್ರಿಕಾ ಪರವಾಗಿ ವೇಗಿಗಳಾದ ಕಗಿಸೋ ರಬಾಡ ಕೇವಲ 20 ರನ್ ನೀಡಿ ಅಗ್ರ ಕ್ರಮಾಂಕದ ಮೂರು ವಿಕೆಟ್ ಪಡೆದು ಬಾಂಗ್ಲಾಗೆ ಆರಂಭಿಕ ಆಘಾತ ನೀಡಿದರು. ಮತ್ತೋರ್ವ ವೇಗಿ ಏನ್ರಿಚ್ ನೊಕಿಯೆ ಕೇವಲ 8 ರನ್ ನೀಡಿ 3 ವಿಕೆಟ್ ಕಬಳಿಸಿದರು. ಸ್ಪಿನ್ನರ್ ತಬ್ರೀಜ್ ಸಂಶಿ 2 ಹಾಗೂ ಡ್ವೇನ್ ಪ್ರಿಟೋರಿಯಸ್ ಒಂದು ವಿಕೆಟ್ ಕಬಳಿಸಿದರು.
ಬಾಂಗ್ಲಾದೇಶ ವಿರುದ್ದ 6 ವಿಕೆಟ್‍ಗಳ ಅಂತರದ ಗೆಲುವು ಸಾಧಿಸುವುದರೊಂದಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ನೆಟ್ ರನ್‍ರೇಟ್ ಸುಧಾರಿಸಿಕೊಂಡಿದ್ದು, ತಮ್ಮ ಸೆಮಿ ಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಸದ್ಯ ಗ್ರೂಪ್ 1ರಲ್ಲಿ 4 ಪಂದ್ಯಗಳನ್ನಾಡಿ 3 ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ತಂಡವು ಎರಡನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. 4 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿರುವ ಇಂಗ್ಲೆಂಡ್ ತಂಡವು ಈಗಾಗಲೇ ಸೆಮೀಸ್‍ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿವೆ.
0 comments:
Post a Comment